ರಾಜ್ಯ

ರೆಮ್ಡೆಸಿವಿರ್ ಔಷಧಿ ತರುವಂತೆ ವೈದ್ಯರ ಸೂಚನೆ: ಅಲೆದು ಅಲೆದು, ಹತಾಶೆಗೊಳಗಾದ ಕುಟುಂಬ

Manjula VN

ಮೈಸೂರು: ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧಿಯ ಕೊರತೆಯಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳುತ್ತಿದ್ದರೂ, ಕೊರತೆ ಇದೆ ಎಂದು ಹೇಳುವ ಸಾಕಷ್ಟು ಘಟನೆಗಳು ಪ್ರತೀನಿತ್ಯ ಬೆಳಕಿಗೆ ಬರುತ್ತಲೇ ಇವೆ. 

ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧಿಯ ಕೊರತೆ ಇದೆ ಎಂದು ಹೇಳಲು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಘಟನೆಯೊಂದು ನಡೆದಿದೆ. 

ಜಿಲ್ಲಾ ಆಸ್ಪತ್ರೆಯಲ್ಲಿ 40 ವರ್ಷದ ಸಿದ್ದನಾಯಕ ಎಂಬ ವ್ಯಕ್ತಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ರೆಮ್ಡೆಸಿವಿರ್ ಔಷಧಿ ನೀಡುವ ಅಗತ್ಯವಿದೆ ಎಂದು ಹೇಳಿದ ವೈದ್ಯರು ಔಷಧಿ ತರುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದಾರೆ. 

ಔಷಧಿ ಖರೀದಿ ಮಾಡಲು ಸಾಕಷ್ಟು ಔಷಧಿ ಮಳಿಗೆಗಳಿಗೆ ಓಡಾಡಿದ್ದಾರೆ. ಆದರೆ, ಎಲ್ಲಿಯೂ ಔಷಧಿ ದೊರೆತಿಲ್ಲ. ಇನ್ನು ಆರ್ಥಿಕವಾಗಿ ದುರ್ಬಲವಾಗಿರುವ ಸಿದ್ದನಾಯಕ ಅವರ ಕುಟುಂಬ ಕಾಳಸಂತೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿರುವ ರೆಮ್ಡೆಸಿವಿರ್ ಔಷಧಿ ಕೊಳ್ಳಲು ನಿಶಕ್ತರಾಗಿದ್ದಾರೆ. 

ಪತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಔಷಧಿಗಾಗಿ ಸಾಕಷ್ಟು ಓಡಾಡಿದೆವು. ಎಲ್ಲಿಯೂ ಸಿಗುತ್ತಿಲ್ಲ. ಇದೀಗ ಯಾವುದೇ ಭರವಸೆಗಳನ್ನೂ ಇಟ್ಟುಕೊಳ್ಳದೆ, ದೇವರ ಪ್ರಾರ್ಥಿಸುತ್ತಿದ್ದೇವೆಂದು ಸಿದ್ದನಾಯಕ ಅವರ ಪತ್ನಿ ಹೇಳಿದ್ದಾರೆ. 

SCROLL FOR NEXT