ರಾಜ್ಯ

ಉಚಿತ ಲಸಿಕೆ: ಕೇಂದ್ರ, ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು- ಕುಮಾರಸ್ವಾಮಿ

Nagaraja AB

ಬೆಂಗಳೂರು: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ  ವ್ಯವಸ್ಥೆ  ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಯನ್ನು ಟೀಕಿಸಿರುವ ಕುಮಾರಸ್ವಾಮಿ, ಲಸಿಕೆ ನೀಡುವ ವಿಷಯದಲ್ಲಿ ಜನತೆ ಸಿನಿಕರಾಗದಂತೆ  ಎಚ್ಚರವಹಿಸುವುದು ಸರ್ಕಾರಗಳ ಜವಾಬ್ದಾರಿ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉಡಾಫೆಯ ಧೋರಣೆ ತಳೆಯುವುದು ಸರಿಯಲ್ಲ ಎಂದಿದ್ದಾರೆ.

ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 2.59 ಕೋಟಿ ಶೇ.37 ರಷ್ಟು 18ರಿಂದ 44 ವರ್ಷದೊಳಗಿನವರಿದ್ದಾರೆ. ಒಬ್ಬ ವ್ಯಕ್ತಿಗೆ ಎರಡು ಡೋಸ್ ಲಸಿಕೆ ನೀಡಬೇಕಾದರೆ 5.19 ಕೋಟಿ ಡೋಸ್ ಅಗತ್ಯವಿದೆ. ಕರ್ಫ್ಯೂ ಅವಧಿ ಬಳಸಿಕೊಂಡು 18 ವರ್ಷ ಮೇಲ್ಪಟ್ಟರಿಗೆ  ಮನೆ ಬಾಗಿಲಿಗೆ ಕಡ್ಡಾಯ ಲಸಿಕೆ ಪ್ರಾರಂಭಿಸಬೇಕು, ಇದರಿಂದ ಯುವ ಜನಾಂಗದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಬಹುದೆಂದು ವಿಶ್ವಾಸ ಇರುವುದಾಗಿ ಕುಮಾರಸ್ವಾಮಿ  ಹೇಳಿದ್ದಾರೆ.

SCROLL FOR NEXT