ರಾಜ್ಯ

ಕೋವಿಡ್-19: ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿತಾಗಾರಗಳ ಮೇಲ್ವಿಚಾರಣೆಗೆ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ತಂಡ ರಚನೆ

Manjula VN

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಚಿತಾಗಾರಗಳ ಮೇಲ್ವಿಚಾರಣೆ ತಂಡದ ಉಸ್ತವಾರಿಯಾಗಿ ಹಿರಿಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ರನ್ನು ನೇಮಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ಮಂಜುನಾಥ್ ಪ್ರಸಾದ್ ರನ್ನು ಕೋವಿಡ್ -19 ಸಂಬಂಧಿತ ಕರ್ತವ್ಯಗಳ ನಿರ್ವಹಣೆಗಾಗಿ ಬಿಬಿಎಂಪಿಗೆ ನೆರವು ಒದಗಿಸುವ ಹೊಣೆಗಾರಿಕೆಯನ್ನೂ ನೀಡಲಾಗಿತ್ತು. ಇದೀಗ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಚಿತಾಗಾರಗಳ ಮೇಲ್ವಿಚಾರಣೆ ತಂಡದ ನಾಯಕರನ್ನಾಗಿ ನೇಮಿಸಿ ಆದೇಶಿಸಿದೆ.

ಕೋವಿಡ್ ನಿಂದ ಮೃತಪಟ್ಟರ ಅಂತ್ಯ ಸಂಸ್ಕಾರ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಜೊತೆಗೆ ಅಂತ್ಯ ಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆ ತಾಸುಗಟ್ಟಲೇ ಕ್ಯೂ ನಿಲ್ಲಬೇಕಾಗುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸುಸೂತ್ರ ಅಂತ್ಯಸಂಸ್ಕಾರ ಹಾಗೂ ಚಿತಾಗಾರ ನಿರ್ವಹಣೆಗಾಗಿ ಈ ಮೇಲ್ವಿಚಾರಣೆ ತಂಡವನ್ನು ರಚಿಸಲಾಗಿದೆ.

ಇವರ ಉಸ್ತುವಾರಿಯಡಿ ಕಾರ್ಯನಿರ್ವಹಿಸಲಿರುವ ಈ ಮೇಲ್ವಿಚಾರಣಾ ತಂಡದ ಸದಸ್ಯರಾಗಿ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಸರ್ಕಾರದ ಉಪ ಕಾರ್ಯದರ್ಶಿ ಕವಿತಾ ರಾಣಿ ಸೇರಿ ಆರು ಮಂದಿ ಇರಲಿದ್ದಾರೆ.

ಈ ತಂಡ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರಿಗೆ ಸೂಕ್ತ ಸಮಯದಲ್ಲಿ ಚಿತಾಗಾರ/ ಸ್ಮಶಾನಗಳಲ್ಲಿ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲು ವಾಹನಗಳ ವ್ಯವಸ್ಥೆ ಕಲ್ಪಿಸಲು ಹಾಗೂ ವಿದ್ಯುತ್ ಚಿತಾಗಾರಗಳು ಮತ್ತು ಶವಸಂಸ್ಕಾರಕ್ಕೆ ಹೊಸ ಸ್ಥಳಗಳನ್ನು ಗುರುತಿಸಿ ಅಗತ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

SCROLL FOR NEXT