ಬೆಳಗಾವಿ: ಮಹಾಮಾರಿ ಕೊರೋನಾ ವೈರಸ್ ಜನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ನಮ್ಮ ಹಬ್ಬ, ಉತ್ಸವ ಹಾಗೂ ಆಚರಣೆಗಳ ಮೇಲಂತೂ ದೊಡ್ಡ ಪರಿಣಾಮವನ್ನೇ ಬೀರಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಚತುರ್ಥಿ ಉತ್ಸವಕ್ಕೆ ಕೊರೋನಾದ ಕರಿನೆರಳು ಬೀದಿದ್ದು, ಈ ಬಾರಿಯೂ ಸರಳವಾಗಿ ಆಚರಣೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಸೆ.10 ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತದ ಅಧಿಕಾರಿಗಳು ಹಬ್ಬದ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ...
- ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಹತ್ತಿರದ ದೇವಾಲಯಗಳು ಅಥವಾ ಮನೆಗಳಲ್ಲಿ ಸ್ಥಾಪಿಸಬೇಕು.
- ಆಯೋಜಕರು ಪೆಂಡಾಲ್ ಗಳನ್ನು ಹಾಕಿ, ರಸ್ತೆಗಳಲ್ಲಿ ಮೂರ್ತಿಗಳನ್ನು ಸ್ಥಾಪನೆ ಮಾಡುವಂತಿಲ್ಲ.
- ಕೋವಿಡ್ ಸೋಂಕಿನ ಮೂರನೇ ಅಲೆಯ ಭೀತಿ ಇರುವುದರಿಂದ ಯಾವುದೇ ರೀತಿಯ ಬಣ್ಣ, ಡಾಲ್ಬಿ, ಪಟಾಕಿಗಳನ್ನು ಸಿಡಿಸದೇ ಸರಳವಾಗಿ ಹಬ್ಬ ಆಚರಣೆ ಮಾಡಬೇಕು.
- ದೇವಸ್ಥಾನಗಳಲ್ಲಿ ಸ್ಥಾಪನೆ ಮಾಡುವ ಮೂರ್ತಿ 4 ಅಡಿ ಹಾಗೂ ಮನೆಗಳಲ್ಲಿ ಸ್ಥಾಪಿಸುವ ಮೂರ್ತಿಗಳು 2 ಅಡಿಗಿಂತ ಎತ್ತರ ಇರಬಾರದು. ಜತೆಗೆ ಪಿಓಪಿ ಬದಲಾಗಿ ಮಣ್ಣನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳು ಸ್ಥಾಪನೆ ಮಾಡಬೇಕು.
- ಗಣೇಶ ಆಚರಣೆಗೆ ಪಾಲಿಕೆ, ಪೊಲೀಸ್, ಹೆಸ್ಕಾಂ, ಮಾಲಿನ್ಯ ನಿಯಂತ್ರಣ, ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ.
- ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರೋ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲವೇ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿದ ಮೊಬೈಲ್ ಟ್ಯಾಂಕ್ ನಲ್ಲಿ ವಿಸರ್ಜನೆ ಮಾಡಬೇಕು.
- ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನಕ್ಕೆ ಕೇಬಲ್ ನೆಟವರ್ಕ್, ವೆಬ್ ಸೈಟ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಾಡಿಕೊಳ್ಳಬೇಕು.
- ಗಣೇಶ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ 5ಕ್ಕೂ ಹೆಚ್ಚು ಜನ ಸೇರಬಾರದು, ಎಲ್ಲರಿಗೂ ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು. ಜಿಲ್ಲಾಡಳಿತ ಜನರ ಆರೋಗ್ಯ ದೃಷ್ಠಿಯಿಂದ ಸೂಚಿಸಿರುವ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಗಣೇಶ ಉತ್ಸವವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಬೆಳಗಾವಿ ನಗರವೊಂದರಲ್ಲಿಯೇ 450ಕ್ಕೂ ಸಾರ್ವಜನಿಕ ಗಣೇಶ ಸ್ಥಾಪನೆ ಆಗುತ್ತವೆ.
ಬೆಳಗಾವಿಯಲ್ಲಿ ಗಣೇಶ ಉತ್ಸವವನ್ನು ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು ಬಂದು ಆರಂಭಿಸಿದ್ದರು. ನಂತರ ವರ್ಷದಿಂದ ವರ್ಷಕ್ಕೆ ಇದು ವಿಜೃಂಭಣೆಯಿಂದ ನಡೆಯುತ್ತದೆ. ಗಣೇಶ ಉತ್ಸವ ಮೆರವಣಿಗೆ ನೋಡಲು ಲಕ್ಷಾಂತರ ಜನ ಪ್ರತಿ ವರ್ಷ ಸೇರುತ್ತಾರೆ. ಆದರೆ, ಕೋವಿಡ್ 3ನೇ ಅಲೆಯ ಕಾರಣದಿಂದ ಈ ವರ್ಷ ಸಾರ್ವಜನಿಕ ಗಣೇಶ ಉತ್ಸವ ದೇವಾಲಯಗಳಲ್ಲಿ ಆಚರಣೆ ಮಾಡಬೇಕೆಂದು ಹೇಳಿ ಅನೇಕ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಹೊರಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos