ರಾಜ್ಯ

ಮಂಗಗಳ ಹತ್ಯೆ: ಅರಣ್ಯ ಇಲಾಖೆ-ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ದಂಪತಿ ಸೇರಿ ಐವರ ಬಂಧನ

Srinivas Rao BV

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ವರದಿಯಾಗಿದ್ದ ಮಂಗಗಳ ಹತ್ಯೆ ಪ್ರಕರಣದಲ್ಲಿ ಅರಣ್ಯ ಇಲಾಖೆ-ಪೊಲೀಸ್ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿದ್ದು ದಂಪತಿ ಸೇರಿ ಐವರನ್ನು ಬಂಧಿಸಲಾಗಿದೆ. 

ಬಂಧಿತ ದಂಪತಿಯನ್ನು ಮಂಗಗಳನ್ನು ಹಿಡಿಯುವುದಕ್ಕಾಗಿಯೇ ನೇಮಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಡಿ.ಸಿ ಆರ್ ಗಿರೀಶ್, ಪೊಲೀಸರು ರಾಮು ಯಶೋದ ಎಂಬ ದಂಪತಿಯನ್ನು ಬಂಧಿಸಿದ್ದು, ಬಾಣಾವರದ ನಿವಾಸಿಗಳಾದ ಇವರನ್ನು ಮಂಗಗಳನ್ನು ಹಿಡಿಯುವುದಕ್ಕಾಗಿಯೇ ನೇಮಕ ಮಾಡಲಾಗಿತ್ತು. ಉಗನೆ ಗ್ರಾಮದ ಮಂಜ, ರುದ್ರೇಶ್, ರಾಮಾನುಜ ಅಯ್ಯಂಗಾರ್ ನ್ನು ಬಂಧಿಸಲಾಗಿದೆ. 

ರಾಮಾನುಜ ಅಯ್ಯಂಗಾರ್ ನೇತೃತ್ವದಲ್ಲಿ ಗ್ರಾಮಸ್ಥರು ರಾಮು ಹಾಗೂ ಯಶೋಧ ಅವರನ್ನು ಸಂಪರ್ಕಿಸಿ ಮಂಗಗಳನ್ನು ಹಿಡಿದು ಕಾಡಿಗೆ ಬಿಡಲು ಮನವಿ ಮಾಡಿದ್ದರು. 

ಮಂಗಗಳನ್ನು ಹಿಡಿಯುವುದಕ್ಕಾಗಿ ಪಂಜರ ಸಿದ್ಧಪಡಿಸಿದ್ದ ಆರೋಪಿಗಳು, ಗೋಣಿಚೀಲದಲ್ಲಿ ಕಟ್ಟಿ ಅವುಗಳನ್ನು ಚೌಡನಹಳ್ಳಿಲ್ಲಿ ಎಸೆದು ಹೋಗಿದ್ದರು. ಈ ಪೈಕಿ ಕೆಲವು ತಪ್ಪಿಸಿಕೊಂಡಿದ್ದವು. ಘಟನೆಯಲ್ಲಿ 30 ಮಂಗಗಳು ಸಾವನ್ನಪ್ಪಿದ್ದವು. 

"ಎಸ್ಒ ಶ್ರೀನಿವಾಸ ಗೌಡ, ಡಿಎಫ್ಒ ಬಸನರಾಜ, ಡಿಸಿ ಇರುವ ತ್ರಿಸದಸ್ಯ ಸಮಿತಿ ಪ್ರಕರಣದ ಸಂಬಂಧ ಶೀಘ್ರವೇ ವಿಸ್ತೃತ ವರದಿ ಸಲ್ಲಿಸಲಿದೆ" ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಾಥಮಿಕ ವರದಿಯ ಪ್ರಕಾರ, ಉಸಿರುಗಟ್ಟುವಿಕೆಯಿಂದ ಮಂಗಗಳು ಸಾವನ್ನಪ್ಪಿವೆ. ಇದೇ ವೇಳೆ ಮಂಗಗಳ ಹಾವಳಿಯನ್ನು ತಪ್ಪಿಸುವುದಕ್ಕೆ ಜಿಲ್ಲಾಡಳಿತ ಹೊಸ ಯೋಜನೆ ರೂಪಿಸುತ್ತಿದೆ. 

ಸಾವಿನ ಕಾರಣ ಅರಿಯುವುದಕ್ಕೆ ಕೋತಿಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವನ್ಯಜೀವಿ ಸಂರಕ್ಷಣ ಕಾಯ್ದೆಯ ಅಡಿಯಲ್ಲಿ ಆರೋಪಿಗಳನ್ನು ಬಂಢಿಸಲಾಗಿದೆ ಎಂದು ಡಿಎಫ್ಒ ಬಸವರಾಜ್ ಹೇಳಿದ್ದಾರೆ. 50 ಕ್ಕೂ ಹೆಚ್ಚು ಮಂಗಗಳನ್ನು ಹಿಡಿಯುವುದಕ್ಕಾಗಿ ಹಿಡಿಯುವವರಿಗೆ ಹಣ ನೀಡಿದ್ದಾಗಿ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. 

ಉಗನೆ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ತೆಂಗು, ಅಡಿಕೆ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಂಗಗಳನ್ನು ಹಿಡಿಯಲು ಗ್ರಾಮಸ್ಥರು ಯತ್ನಿಸಿದ್ದರು. 

SCROLL FOR NEXT