ರಾಜ್ಯ

ಪ್ರಧಾನಿ ಮೋದಿಗೆ ಮಣಿಪುಷ್ಪ ಮಾಲೆ ಹಾಕುವ ಮೂಲಕ ಶಿರಸಿ ಕುಶಲಕರ್ಮಿಗಳ ಮನಗೆದ್ದ ಸಿಎಂ ಬೊಮ್ಮಾಯಿ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಿರಿಯ ಬಿಜೆಪಿ ನಾಯಕರಿಗೆ ಶ್ರೀಗಂಧದ ಹೂಮಾಲೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಶಿರಸಿ ವಿಶಿಷ್ಠ ಕುಶಲಕರ್ಮಿಗಳ ಮನಗೆದ್ದಿದ್ದಾರೆ.

ಮಣಿಪುಷ್ಪ ಮಾಲೆಗಳು ಎಂದು ಕರೆಯಲ್ಪಡುವ ಈ ಹೂಮಾಲೆಗಳು ಅತ್ಯಂತ ದುಬಾರಿ ಶ್ರೀಗಂಧದ ಹೂಮಾಲೆಗಳಾಗಿದ್ದು, ಪ್ರತಿ ಮಾಲೆಗೆ 2,145 ರೂ. ಮತ್ತು ಪ್ರತಿ ಹೂವಿನಲ್ಲಿ ಮಾಣಿಕ್ಯ ಸ್ಟಡ್(ಮಣಿ ಪುಷ್ಪ)ವನ್ನು ಹೋಲುವ ಕೆಂಪು ಬಣ್ಣದ ಚುಕ್ಕೆಯನ್ನು ಹೊಂದಿರುತ್ತವೆ. 

ಬಿಎಸ್ ಯಡಿಯುರಪ್ಪ ಅವರು ಮುಖ್ಯಮಂತ್ರಿಯಾಗಿ ಕೊನೆಯ ಬಾರಿಗೆ ದೆಹಲಿಗೆ ಭೇಟಿ ನೀಡಿದಾಗ 10 ಲಕ್ಷಕ್ಕೂ ಅಧಿಕ ಮೌಲ್ಯದ ಶ್ರೀಗಂಧದ ಹೂಮಾಲೆಗಳನ್ನು ಮತ್ತು ಕಲಾಕೃತಿಗಳನ್ನು ಹೊತ್ತೊಯ್ದಿದ್ದರು.

ಈ ಬಾರಿ ಬೊಮ್ಮಾಯಿ ಅವರು ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಕಾವೇರಿ ಎಂಪೋರಿಯಂನಲ್ಲಿ 17 ಮಣಿಪುಷ್ಪ ಮಾಲೆಗಳನ್ನು ಖರೀದಿಸಿದ್ದರು.

ದೆಹಲಿಯ ಕಾವೇರಿ ಎಂಪೋರಿಯಂ ಮತ್ತು ಕರ್ನಾಟಕ ಭವನದ ಅಧಿಕಾರಿಗಳು ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, ಉತ್ತರ ಕರ್ನಾಟಕದವರಾದ ಬೊಮ್ಮಾಯಿ ಈ ಪ್ರದೇಶದ ಕುಶಲಕರ್ಮಿಗಳನ್ನು ಉತ್ತೇಜಿಸಲು ಈ ಹೂಮಾಲೆಗಳನ್ನು ಆರಿಸಿಕೊಂಡರು. "ಇವು ಹೊಸದಾಗಿ ವಿನ್ಯಾಸಗೊಳಿಸಿದ ಹೂಮಾಲೆಗಳು ಮತ್ತು ಪ್ರತಿ ಹೂವಿನ ಮಧ್ಯದಲ್ಲಿ ಕೆಂಪು ಸ್ಟಡ್ ಮಾದರಿಯನ್ನು ಹೊಂದಿವೆ, ಇದು ಮಣಿಯನ್ನು ಹೋಲುತ್ತದೆ, ಹೀಗಾಗಿ ಈ ಹೆಸರು. ಇದು ಮರದ ತುಂಡಾಗಿದ್ದು ಅದರ ಸುತ್ತಲೂ ಹೂವನ್ನು ನೇಯಲಾಗುತ್ತದೆ ಮತ್ತು ಕೆಂಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಶಿರಸಿಯ ಕಲಾವಿದರ ಪ್ರತಿಭೆಯನ್ನು ಗೌರವಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಣಿಪುಷ್ಪ ಮಾಲೆಯನ್ನು ರಾಷ್ಟ್ರೀಯ ರಾಜಕೀಯ ನಾಯಕರಿಗೆ ನೀಡುತ್ತಿರುವುದು ಇದೇ ಮೊದಲು. ನಮ್ಮ ನಿಗಮವು ಕಲಾವಿದರಿಗೆ ತಮ್ಮ ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶಿಸಲು ಮತ್ತು ಮನ್ನಣೆ ಪಡೆಯಲು ಒಂದು ಮಾಧ್ಯಮವಾಗಿದೆ ಎಂದು ಕೆಎಸ್‌ಎಚ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಿ ರೂಪಾ ಅವರು ಹೇಳಿದ್ದಾರೆ.

SCROLL FOR NEXT