ರಾಜ್ಯ

ಕೋವಿಡ್ ಆತಂಕ: ಸಾರ್ವಜನಿಕ ಪ್ರದೇಶಗಳ ಮೇಲೆ ಕಣ್ಗಾವಲಿಡಲು ಬಿಬಿಎಂಪಿಯಿಂದ 15 ತಂಡಗಳ ನಿಯೋಜನೆ!

Manjula VN

ಬೆಂಗಳೂರು: ನೆರೆ ರಾಜ್ಯಗಳ ಜೊತೆಗೆ ಇದೀಗ ಬೆಂಗಳೂರಿನಲ್ಲೂ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳ ಕೈಗೊಳ್ಳಲು ಮುಂದಾಗಿರುವ ಬಿಬಿಎಂಪಿಯು ಹೆಚ್ಚೆಚ್ಚು ಜನ ಸೇರುವ ಸಾರ್ವಜನಿಕ ಪ್ರದೇಶಗಳ ಮೇಲೆ ಕಣ್ಗಾವಲಿಡಲು 15 ತಂಡಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾಹಿತಿ ನೀಡಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವವರ ಬಳಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಇದೆಯೇ ಮತ್ತು ಅವರಲ್ಲಿ ಸೋಂಕಿನ ಲಕ್ಷಣಗಳಿವೆಯೇ ಎಂಬುದರ ಕುರಿತು ತಪಾಸಣೆ ನಡೆಸಲಾಗುತ್ತಿದೆ. ನಗರದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಿದ್ದರೂ ಕೂಡ ಹೆಚ್ಚಿನ ಜಾಗ್ರವಹಿಸಬೇಕಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳತ್ತಿದೆ. ಜನರೂ ಕೂಡ ನಿಯಮಗಳ ಪಾಲಿಸಿ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ. ವೈರಸ್ ಈಗಲೂ ಸಕ್ರಿಯವಾಗಿರುವುದರಿಂದ ಸೋಂಕು ಹೆಚ್ಚಾಗಲಿ, ಬಿಡಲಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೊರೋನಾ ಎರಡನೇ ಅಲೆ ಅಂತ್ಯವಾಗಿ, ಮೂರನೇ ಅಲೆ ಆರಂಭವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಜ್ಞರು ನಿರ್ಧಾರ ಕೈಗೊಂಡು, ಮಾಹಿತಿ ನೀಡಲಿದ್ದಾರೆ. ಈಗಾಗಲೇ ಲಸಿಕೆ ಪಡೆದವರ ಹಾಗೂ ಲಸಿಕೆ ಪಡೆಯದವರಲ್ಲಿ ಪ್ರತಿಕಾಯದ ಪ್ರಮಾಣ ಕುರಿತು ಅಧ್ಯಯನ ನಡೆಸಲು ಸೆರೋ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆಯಿದೆ. ಹೀಗಾಗಿ ಮಾದರಿ ಸರ್ವೇ ಮಾಡಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಗುವುದು. ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿದೆ ಎಂದು ತಿಳಿಸಿದರು. 

ಪೊಲೀಸರು ಮಾರ್ಷಲ್ ಗಳು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಕೈಜೋಡಿಸಿ ಕೆಲಸ ಮಾಡುತ್ತಿದ್ದು, ಕೋವಿಡ್ ನಿಯಮ ಪಾಲಿಸದವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿದೆ. ನಿಯಮ ಸಡಿಲಿಕೆ ಕುರಿತು ಸರ್ಕಾರ ಯಾವುದೇ ರೀತಿಯ ಘೋಷಣೆಗಳನ್ನೂ ಮಾಡಿಲ್ಲ. ಹೀಗಾಗಿ ಜನರು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಮತ್ತಷ್ಟು ಕ್ರಮ ಕೈಗೊಳ್ಳುವ ಕುರಿತು ತಜ್ಞರೊಂದಿಗೆ ಸರ್ಕಾರ ಚರ್ಚೆ ನಡೆಸಲಿದೆ. ಪ್ರಸುತ್ತ ನಗರದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಆದರೂ ಹೊರ ರಾಜ್ಯದಿಂದ ಬಂದವರ ಮೇಲೆ ಕಣ್ಗಾವಲಿಡಲು ಮಾರುಕಟ್ಟೆ ಸೇರಿದಂತೆ ಹೆಚ್ಚೆಚ್ಚು ಜನರು ಸೇರಿವ ಪ್ರದೇಶಗಳಲ್ಲಿ 15 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT