ರಾಜ್ಯ

ಬೊಮ್ಮಾಯಿ ಭೇಟಿ ಮಾಡಿದ ಶರದ್ ಪವಾರ್, ಮಹಾರಾಷ್ಟ್ರ ಸಚಿವ: ನೀರು ಹಂಚಿಕೆ ಕುರಿತು ಮಾತುಕತೆ

Manjula VN

ಬೆಂಗಳೂರು: ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹಾಗೂ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ್ದು, ಈ ವೇಳೆ ಉಭಯ ರಾಜ್ಯಗಳ ನಾಯಕರು ಕರ್ನಾಟಕ– ಮಹಾರಾಷ್ಟ್ರ ನದಿ ನೀರು ಹಂಚಿಕೆ ವಿಷಯದ ಕುರಿತು ಸಮಾಲೋಚನೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆ ನಡೆದಿದ್ದು, ಪ್ರವಾಹದ ಸಂದರ್ಭದಲ್ಲಿ ಪರಸ್ಪರ ಸಹಕಾರ ಮತ್ತು ನದಿ ನೀರಿನ ಹಂಚಿಕೆ ವಿವಾದಗಳನ್ನು ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಾಯಕರು ಒಪ್ಪಿಗೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 

ಬೊಮ್ಮಯಿಯವರನ್ನು ಭೇಟಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಪವಾರ್ ಅವರು, ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೊಮ್ಮಾಯಿಯವರು ದೂರವಾಣಿ ಕರೆ ಮಾಡಿ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ಒಪ್ಪಿಗೆ ನೀಡಿ ಗೌರವಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು ಎಂದು ನೀರು ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿರುವ ವಿಚಾರವನ್ನು ಪ್ರಸ್ತಾಪಿಸದೆಯೇ ಹೇಳಿದ್ದಾರೆ. 

ಬೊಮ್ಮಾಯಿ ಅವರ ಆತ್ಮೀಯ ಆತಿಥ್ಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂಬರುವ ವರ್ಷಗಳಲ್ಲಿ ಎರಡು ರಾಜ್ಯಗಳು ಸಹಕಾರಿ ದೃಷ್ಟಿಕೋನದಿಂದ ಒಟ್ಟಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ. 

ಉಭಯ ನಾಯಕರು ಸಭೆ ನಿಗದಿಗೊಳಿಸುವ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದ್ದು, ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ನೀರು ಹಂಚಿಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಪ್ರವಾಹದ ವೇಳೆ ಪರಸ್ಪರ ಸಹಕಾರ ಮಾಡಿಕೊಳ್ಳುವ ಕುರಿತೂ ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. 

ಮಾತುಕತೆ ಮೂಲಕ ಸೌಹಾರ್ದಯುತವಾಗಿ ಉಭಯ ರಾಜ್ಯಗಳ ನಡುವಿನ ಜಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಉಭಯ ನಾಯಕರು ಮುಂದಾಗಿದ್ದಾರೆ. ಅಂತರಾಜ್ಯ ಜಲವಿಷಯ ಮತ್ತು ನದಿ ನೀರು ಹಂಚಿಕೆ ಕುರಿತು ವಿಸ್ತೃತವಾಗಿ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಸಭೆ ನಡೆಸಲು ಉಭಯ ನಾಯಕು ಸಹಮತ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿ ಮಾತುಕತೆ ನಡೆಸಲು ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸುವ ಕುರಿತು ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು,  3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ನ್ಯಾಯಾಧಿಕರಣ ಹೊರಡಿಸಿರುವ ಅಧಿಸೂಚನೆ ಕುರಿತು ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಜತೆ ಚರ್ಚಿಸಿದ್ದು, ದೆಹಲಿಯಲ್ಲಿ ಮತ್ತೊಮ್ಮೆ ಸಭೆ ನಡೆಸುವ ನಿರ್ಧಾರ ಮಾಡಿದ್ದೇವೆ ಎಂದರು.

ದೂದ್ ಗಂಗಾ ಯೋಜನೆ ಕುರಿತು ಸಮಾಲೋಚನೆ ನಡೆಸಲಾಯಿತು. ಗಡಿ ಜಿಲ್ಲೆಯಲ್ಲಿ ನೆರೆ ನಿರ್ವಹಣೆ ಕುರಿತು ಚರ್ಚಿಸಿದ್ದೇವೆ. ನೆರೆ ನಿರ್ವಹಣೆ ವಿಷಯದಲ್ಲಿ ಉಭಯ ರಾಜ್ಯಗಳ ನಡುವೆ ಸಮನ್ವಯತೆ ಚೆನ್ನಾಗಿದೆ. ಉಭಯ ರಾಜ್ಯಗಳ ನಡುವಿನ ನೀರಿನ ಹಂಚಿಕೆ ವಿಚಾರದಲ್ಲಿ ಸಮನ್ವಯತೆಯೆಡೆ ನಮ್ಮ ಮೊದಲ ಆದ್ಯತೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು

SCROLL FOR NEXT