ರಾಜ್ಯ

ಭಟ್ಕಳದಲ್ಲಿ ಎನ್ಐಎ ಬೇಟೆ: ಇಸಿಸ್ ಜೊತೆ ನಂಟು ಹೊಂದಿದ್ದ ವ್ಯಕ್ತಿ ಬಂಧನ

Manjula VN

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ, ಕರ್ನಾಟಕ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಎಂಬ ಆರೋಪ ಹೊತ್ತಿರುವ ಜಫ್ರಿ ಜಹ್ವಾರ್​ ದಾಮುದಿ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ. 

ಐಸಿಸ್ ಸಂಘಟನೆಗೆ ಭಾರತದಿಂದ ಯುವಕರು ಸೇರಲು ಪ್ರೇರೇಪಿಸುತ್ತಿದ್ದ ಎಂಬ ಆರೋಪ ಈತನ ಮೇಲಿದ್ದು, ಈತ ಅಬು ಹಾಜಿರ್ ಅಲ್ ಬದ್ರಿ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕದ ಮೂಲಕ ಐಸಿಸ್ ವಿಚಾರಧಾರೆಗಳನ್ನು ದಕ್ಷಿಣ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ. ಎನ್​ಕ್ರಿಪ್ಟೆಡ್​ ಚಾಟಿಂಗ್ ಸಿಸ್ಟಂಗಳಲ್ಲಿ‌ ಸಕ್ರಿಯನಾಗಿದ್ದ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಅಶಾಂತಿ ಉಂಟುಮಾಡಲು 'ಐಸಿಸ್‌'ಗೆ ಮುಸ್ಲಿಂ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಆರೋಪದಲ್ಲಿ 'ವಾಯ್ಸ್ ಆಫ್ ಹಿಂದ್' ವಿರುದ್ಧ ದೆಹಲಿಯಲ್ಲಿ ಈ ವರ್ಷ ಜೂನ್ 29ರಂದು ಪ್ರಕರಣ ದಾಖಲಾಗಿತ್ತು. ಅದರ ಬರಹಗಳನ್ನು 'ಅಬು ಹಾಜಿರ್ ಅಲ್ ಬದ್ರಿ' ಎಂಬ ಐ.ಡಿ ಮೂಲಕ ಭಾಷಾಂತರ ಮಾಡಲಾಗುತ್ತಿತ್ತು. ಆ ವ್ಯಕ್ತಿಯೇ ಶುಕ್ರವಾರ ಭಟ್ಕಳದಲ್ಲಿ ಬಂಧಿತನಾಗಿರುವ ಜುಫ್ರಿ ಜವಾಹರ್ ದಾಮುದಿ ಎಂದು ಹೇಳಲಾಗುತ್ತಿದೆ. 

ಈತ 'ಐಸಿಸ್' ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ 2016ರಲ್ಲಿ ಬಂಧಿತನಾಗಿರುವ ಅದ್ನಾನ್ ಹಸನ್ ದಾಮುದಿಯ ಕಿರಿಯ ಸಹೋದರ ಎಂದು ಎನ್.ಐ.ಎ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ.11ರಂದು ಎನ್ಐಎ ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ದಾಳಿ ನಡೆಸಿತ್ತು. ಈ ವೇಳೆ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿತ್ತು. ಉಮರ್ ನಿಸಾರ್, ತನ್ವೀರ್ ಅಹ್ಮದ್ ಹಾಗೂ ರಮೀಜ್ ಅಹ್ಮದ್ ಲೋನ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿತ್ತು. 

ಈ ದಾಳಿ ಬಳಿಕ ನಿನ್ನೆ ಭಟ್ಕಳದ ಎರಡು ಕಡೆ ದಾಳಿ ನಡೆಸಿರುವ ಎನ್ಐಎ ತಂಡ, ಜಫ್ರಿ ಜಹ್ವಾರ್​ ದಾಮುದಿ ಎಂಬಾತನನ್ನು ಬಂಧನಕ್ಕೊಳಪಡಿಸಿ. ಮೊಬೈಲ್ ಫೋನ್, ಸಿಮ್‌ಕಾರ್ಡ್‌ಗಳು, ಹಾರ್ಡ್‌ಡಿಸ್ಕ್‌ಗಳು, ಮೆಮೊರಿ ಕಾರ್ಡ್‌ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಿದೆ. 

SCROLL FOR NEXT