ರಾಜ್ಯ

ಚಿತ್ರೀಕರಣ ವೇಳೆ ಫೈಟರ್ ಸಾವು ಪ್ರಕರಣ: ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Srinivasamurthy VN

ಬೆಂಗಳೂರು: ಚಿತ್ರೀಕರಣ ವೇಳೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಜಡ್ಜ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚಿತ್ರದ ನಿರ್ದೇಶಕ ಶಂಕರ್​ ರಾಜ್, ಫೈಟ್ ಮಾಸ್ಟರ್ ವಿನೋದ್ ಕುಮಾರ್ ಮತ್ತು ಕ್ರೇನ್ ಆಪರೇಟರ್ ಮಹಾದೇವ್ ಎಂಬುವವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ರಚಿತಾ ರಾಮ್​ ಮತ್ತು ಅಜಯ್​ ರಾವ್​ ಅಭಿನಯಿಸುತ್ತಿದ್ದ ‘ಲವ್​ ಯೂ ರಚ್ಚು’ (Love You Racchu) ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ವಿದ್ಯುತ್​ ತಗುಲಿ ಫೈಟರ್​ ವಿವೇಕ್​ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ನಿರ್ದೇಶಕ ಶಂಕರ್​ ರಾಜ್​ ಎ1, ನಿರ್ಮಾಪಕ ಗುರು ದೇಶಪಾಂಡೆ ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಹಾಗೂ ಕ್ರೇನ್ ಆಪರೇಟರ್ ಮಹದೇವ್ ಎ5 ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಪೈಕಿ ಶಂಕರ್​ ರಾಜ್, ವಿನೋದ್ ಕುಮಾರ್ ಮತ್ತು ಮಹದೇವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಘಟನೆ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದಾರೆ. ಅವರನ್ನು ಬಿಡದಿ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ. 

ಏನಿದು ಘಟನೆ
ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಸಾಹಸ ದೃಶ್ಯದಲ್ಲಿ ನಟಿಸುತ್ತಿರುವಾಗ ಹೈ ಟೆನ್ಷನ್​ ವಿದ್ಯುತ್​ ತಂತಿ ತಗುಲಿದ್ದರಿಂದ ಫೈಟರ್​ ವಿವೇಕ್​ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದುರ್ಘಟನೆಯಲ್ಲಿ ರಂಜಿತ್​ ಎಂಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಅವರನ್ನು​ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬೆಳಗ್ಗೆ 10 ಗಂಟೆ ಬಳಿಕ ವಿವೇಕ್ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಫೈಟರ್​ ವಿವೇಕ್​ ಶವ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುವುದು.

SCROLL FOR NEXT