ರಾಜ್ಯ

ಸ್ವಾತಂತ್ರ್ಯ ದಿನಾಚರಣೆ: ಕಳೆದ ವರ್ಷದಂತೆಯೇ ಈ ಬಾರಿಯೂ ಸರಳ ಆಚರಣೆಗೆ ನಿರ್ಧಾರ

Manjula VN

ಬೆಂಗಳೂರು: ಕಳೆದ ವರ್ಷದಂತೆಯೇ ಈ ವರ್ಷವೂ ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಕೊರೋನಾ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ನಿನ್ನೆಯಷ್ಟೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಮಾತುಕತೆ ನಡೆಸಿದರು. 

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌರವ್ ಗುಪ್ತಾ ಅವರು, ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ 15ಕ್ಕೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಆದರೆ ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ. ಈ ಬಾರಿ ಸಾರ್ವಜನಿಕರು ಭಾಗವಹಿಸಲು ಅವಕಾಶವೇ ಇಲ್ಲ. ಗಣ್ಯ ವ್ಯಕ್ತಿಗಳು, ಆಹ್ವಾನಿತರು ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು. 

ಸ್ವಾತಂತ್ರ್ಯ ದಿನಾಚರಣೆ ಹೇಗೆ ನಡೆಯಬೇಕು ಎನ್ನುವುದರ ಬಗ್ಗೆ ಶೀಘ್ರವೇ ಸಿಎಸ್ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಡಿಮೆ ಜನರನ್ನ ಸೇರಿಸುವ ಬಗ್ಗೆ ಚಿಂತನೆಯೂ ಇದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಬೇಕಾಗಿದೆ. ಸ್ಥಳ ವೀಕ್ಷಣೆ ಸಹ ಶೀಘ್ರವೇ ನಡೆಯಲಿದೆ. ಬಹುತೇಕ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹೆಚ್ಚಿನ ತೆರಿಗೆ ಹಾಗೂ ದಂಡ ಕಟ್ಟುವಂತೆ ಅಧಿಕಾರಿಗಳು ಸೂಚಿಸುತ್ತಿರುವ ಕುರಿತು ನಾಗರೀಕರು ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆಯು ನಾಲ್ಕು ವರ್ಷಗಳಿಂದಲೂ ಇದೆ. ಈಗಾಗಲೇ ವಲಯಗಳು ಬದಲಾಗಿವೆ, ಆದರೆ ಜನರು ಇನ್ನೂ ಹಳೆಯ ರೂಪದಲ್ಲಿಯೇ ತೆರಿಗೆಗಳನ್ನು ಪಾವತಿಸುತ್ತಿದ್ದಾರೆ, ವಲಯಗಳು ಬದಾಲವಣೆಯಾಗಿರುವ ಕುರಿತು ಜನರಿಗೆ ಮಾಹಿತಿ ನೀಡದಿರುವಲ್ಲಿ ಅಧಿಕಾರಿಗಳಿಂದಲೂ ಲೋಪವಾಗಿರಬಹುದು ಅಥವಾ ತೆರಿಗೆಯಲ್ಲಿದೋಷಗಳು ಕಂಡು ಬಂದಿರುಬಹುದು. ಈ ಬಗ್ಗೆ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ.

SCROLL FOR NEXT