ರಾಜ್ಯ

ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚಾಗಿದ್ದರೂ, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣ

Lingaraj Badiger

ವಿಜಯಪುರ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಕರ್ನಾಟಕದ ಗಡಿ ಜಿಲ್ಲೆಗಳು ಮಾತ್ರ ಹೊಸ
ಪ್ರಕರಣಗಳ ಸಂಖ್ಯೆ ಇಳಿಕೆಗೆ ಸಾಕ್ಷಿಯಾಗುತ್ತಿವೆ. 

ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳು - ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿವೆ. ಅಲ್ಲಿ 5,000 ಕ್ಕಿಂತಲೂ ಹೆಚ್ಚಿನ ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವ್ ಪ್ರಮಾಣ ಶೇ. 3 ಕ್ಕಿಂತ ಹೆಚ್ಚಾಗಿದೆ. 

ಆದಾಗ್ಯೂ, ಕರ್ನಾಟಕದ ಗಡಿ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬೀದರ್‌ನಲ್ಲಿ ಪಾಸಿಟಿವ್ ಪ್ರಮಾಣ ಶೇ. 1 ಕ್ಕಿಂತ ಕಡಿಮೆ ಇದೆ ಮತ್ತು ಇದು ರಾಜ್ಯದ ಪಾಸಿಟಿವ್ ದರಕ್ಕಿಂತ ಕಡಿಮೆಯಾಗಿದೆ. ಬೆಳಗಾವಿ 435 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೆ, ಇತರ ಗಡಿ ಜಿಲ್ಲೆಗಳಲ್ಲಿ ಈ ಸಂಖ್ಯೆ 100 ಕ್ಕಿಂತ ಕಡಿಮೆ ಇದೆ. 

"ಜುಲೈ ಕೊನೆಯ ವಾರದಲ್ಲಿ, ಬೆಳಗಾವಿಯಲ್ಲಿ 334 ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ಮೊದಲ ವಾರದಲ್ಲಿ ಪ್ರಕರಣಗಳ ಸಂಖ್ಯೆ 239 ಕ್ಕೆ ಇಳಿದಿದೆ. ಅದೇ ರೀತಿ ಕಲಬುರಗಿಯಲ್ಲಿ ಜುಲೈ ಕೊನೆಯ ವಾರದಲ್ಲಿ 68 ಪ್ರಕರಣಗಳು ಮತ್ತು ಆಗಸ್ಟ್ ಮೊದಲ ವಾರದಲ್ಲಿ ಕೇವಲ 46 ಪ್ರಕರಣಗಳು ವರದಿಯಾಗಿವೆ. 

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳು, ಶೇಕಡಾ 98ಕ್ಕಿಂತ ಹೆಚ್ಚಿನ ಚೇತರಿಕೆಯ ದರವನ್ನು ಹೊಂದಿವೆ ಎಂದು ಕೋವಿಡ್ -19 ವಾರ್ ರೂಂ ಅಂಕಿಅಂಶಗಳು ಬಹಿರಂಗಪಡಿಸಿವೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿಕಾಂತ್ ವಿ ಮುನ್ಯಾಳ್ ಅವರು, "ವಲಸಿಗರ ಮತ್ತು ನಿಯಮಿತ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ನಾವು
ಅಂತಹ ಜನರನ್ನು ಪ್ರತಿ ಎರಡು ವಾರಗಳಿಗೊಮ್ಮೆ ಪರೀಕ್ಷಿಸುವ ಮೂಲಕ ಗಮನಿಸುತ್ತಿದ್ದೇವೆ. ಮೂರನೇ ಅಲೆಯ ಭೀತಿಯಿಂದ ನಾವು ಜಿಲ್ಲೆಯಾದ್ಯಂತ, ವಿಶೇಷವಾಗಿ ಗಡಿ ತಾಲೂಕುಗಳಲ್ಲಿ ಲಸಿಕೆಯ ವೇಗವನ್ನು ಹೆಚ್ಚಿಸುತ್ತಿದ್ದೇವೆ. ನಾವು ಗೋವಾ ಮತ್ತು ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಸ್ಕ್ರೀನಿಂಗ್ ಕ್ಯಾಂಪ್‌ಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT