ರಾಜ್ಯ

ರಾಜ್ಯ ಪ್ರವೇಶಿಸಲು ನಕಲಿ ಆರ್ ಟಿಪಿಸಿಆರ್ ವರದಿ ನೀಡಿದ ಕೇರಳ ದಂಪತಿ ಬಂಧನ

Lingaraj Badiger

ಮಡಿಕೇರಿ: ಕೊಡಗಿನಲ್ಲಿ ನಕಲಿ ನೆಗೆಟಿವ್ ಆರ್‌ಟಿಪಿಸಿಆರ್ ವರದಿ ತೋರಿಸಿದ್ದಕ್ಕಾಗಿ ಕೇರಳದ ದಂಪತಿಯನ್ನು ಬಂಧಿಸಲಾಗಿದೆ.

ಜಿಲ್ಲೆಯ ಅಮ್ಮತಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಸಂಜೆ ಈ ಘಟನೆ ವರದಿಯಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದ ಸೈಯದ್ ಮೊಹಮ್ಮದ್(32) ಅವರು ತಮ್ಮ ಪತ್ನಿ ಆಯೇಷಾ ರೆಹಮಾನ್(27) ಜೊತೆ ಕೊಡಗಿಗೆ ಭೇಟಿ ನೀಡುತ್ತಿದ್ದರು. ಆಯೇಶಾ ಮಡಿಕೇರಿ ತಾಲ್ಲೂಕಿನ ಎಮ್ಮಾಮಾಡು ಗ್ರಾಮದವರು. ಆಯೇಷಾಳ ಹೆತ್ತವರನ್ನು ಭೇಟಿ ಮಾಡಲು ದಂಪತಿಗಳು ಎಮ್ಮೆಮಾಡುಗೆ ಭೇಟಿ ನೀಡಲು ಯೋಜಿಸಿದ್ದರು.

ಮೊಹಮ್ಮದ್ ಅವರು ಕಾರಿನಲ್ಲಿ ತಮ್ಮ ಮನೆಯಿಂದ ಜಾಲ್ಸೂರು ಮಾರ್ಗವಾಗಿ ಕೊಡಗಿಗೆ ತೆರಳುತ್ತಿದ್ದ ವೇಳೆ ಚೆಕ್‌ಪೋಸ್ಟ್‌ನಲ್ಲಿ ಜನಸಂದಣಿ ಇದ್ದುದರಿಂದ ಅಧಿಕಾರಿಗಳು ಸರಿಯಾಗಿ ಆರ್‌ಟಿಪಿಸಿಆರ್ ವರದಿ ಪರೀಕ್ಷಿಸಿರಲಿಲ್ಲ.

ಆದಾಗ್ಯೂ, ಅವರನ್ನು ಅಮ್ಮತಿ ಚೆಕ್‌ಪೋಸ್ಟ್‌ನಲ್ಲಿ ತಡೆದು ಪರೀಕ್ಷಿಸಿದಾಗ ಅವರ ಆರ್‌ಟಿಪಿಸಿಆರ್ ವರದಿ ನಕಲಿ ಎಂದು ಕಂಡುಬಂದಿದೆ. ಅದರ ಕ್ಯೂಆರ್ ಕೋಡ್ ಸ್ಕ್ಯಾನ್ ಆಗಿದ್ದು, ಇದು ಶರ್ಫುದ್ದೀನ್ ಎಂಬುವವರ ಹೆಸರಿನಲ್ಲಿದೆ.

ಮಂಜೇಶ್ವರದಲ್ಲಿ ನಕಲಿ ಪ್ರಮಾಣಪತ್ರವನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸಾಂಕ್ರಾಮಿಕ ನಿಯಂತ್ರಣ ಕಾಯಿದೆಯಡಿ ಕೇರಳ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದಂಪತಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರ ಆಲ್ಟೊ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

SCROLL FOR NEXT