ರಾಜ್ಯ

ಮೇಕೆದಾಟು ವಿಚಾರದಲ್ಲಿ ಬಿಜೆಪಿ ನಾಯಕ ಯೂಟರ್ನ್: ಕನ್ನಡಿಗರ ಕಣ್ಣು ಕೆಂಪಗಾಗಿಸಿದ ಸಿಟಿ ರವಿ ಹೇಳಿಕೆ!

Manjula VN

ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಯೂ ಟರ್ನ್‌ ಹೊಡೆದಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ನೀಡಿದ ಹೇಳಿಕೆಯೊಂದು ಇದೀಗ ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಮೇಕೆದಾಟು ಯೋಜನೆಯನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವಿಚಾರ ಸಂಬಂಧ ರಾಜ್ಯದ ಹಲವಾರು ರಾಜಕೀಯ ನಾಯಕರು ಪಕ್ಷಬೇಧ ಮರೆತು ಸರ್ಕಾರದೊಂದಿಗೆ ನಿಲ್ಲಲು ನಿರ್ಧರಿಸಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಈ ವಿಚಾರದಲ್ಲಿ ಯೂಟರ್ನ್ ಹೊಡೆದಿರುವುದು ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಮೇಕೆದಾಟು ಯೋಜನೆ ಕುರಿತು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸಿಟಿ ರವಿಯವರು, ಅಂತರ್ ರಾಜ್ಯ ವಿಚಾರವನ್ನು ರಾಜಕೀಯ ಮಾಡುವುದು ಸರಿಯಲ್ಲ. ತಮ್ಮ ತಮ್ಮ ಪಾಲಿನ ನೀರನ್ನು ಬಳಕೆ ಮಾಡಲು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ನಾನು ಭಾರತದ ಪರ. ನ್ಯಾಯಾಲಯಗಳು ಈ ಬಗ್ಗೆ ಹಲವು ತೀರ್ಪುಗಳನ್ನು ನೀಡಿವೆ. ನ್ಯಾಯ ಯಾರ ಪರವಾಗಿದೆಯೋ ಹಾಗೆ ನಾನು. ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ಮಾಡಿಕೊಂಡರೆ ಅಡ್ಡಿ ಇಲ್ಲ. ತೀರ್ಪನ್ನು ಮೀರಿದರೆ ಮಾತ್ರ ವಿರೋಧ ವ್ಯಕ್ತವಾಗಲಿದೆ. ಇದೇ ಮಾತನ್ನು ತಮಿಳುನಾಡಿನ ನೆಲದಲ್ಲಿಯೂ ಹೇಳಿದ್ದೇನೆ. ಇಲ್ಲಿಯೂ ಹೇಳುತ್ತಿದ್ದೇನೆಂದು ಹೇಳಿದ್ದರು. 

ಈ ಹೇಳಿಕೆ ಇದೀಗ ವಿರೋಧ ಪಕ್ಷದ ನಾಯಕರು ಹಾಗೂ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಸಿಟಿ ರವಿಯವರ ಹೇಳಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. 

ನಾವೇನು ಪಾಕಿಸ್ತಾನ ಅಥವಾ ಚೀನಾ ಪರವಿದ್ದೇವೆಯೇ? ನಾವೂ ಕೂಡ ಭಾರತೀಯರೇ. ಮೊದಲು ನಾವು ಕನ್ನಡಿಗರು. ನಮಗೆ ಅನ್ಯಾಯವಾಗುತ್ತಿದ್ದಾರೆ ಅದರ ಪರ ಧ್ವನಿ ಎತ್ತಬೇಕು. ಇದನ್ನು ರವಿಯವರು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಮೇಕೆದಾಟು ಯೋಜನೆ ನಮ್ಮ ಹಕ್ಕು, ಅದನ್ನ ತಪ್ಪಿಸಲು ತಮಿಳುನಾಡಿಗೆ ಹಕ್ಕಿಲ್ಲ. ಸಿಟಿ ರವಿ ಕನ್ನಡಿಗರ ಪರ ಇಲ್ಲ. ಕೇಂದ್ರದಲ್ಲಿ ಮಾತನಾಡಿ ಅನುಮತಿ ಕೊಡಿಸಲಿ, 25 ಸಂಸದರು ಇದ್ದಾರೆ. ಮೇಕೆದಾಟು ಯೋಜನೆ ಮತ್ತು ರಾಜ್ಯಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಮಾತನಾಡಿಲ್ಲ. ಒಂದೇ ಒಂದು ದಿನ ಸಂಸದರು ತುಟಿ ಬಿಚ್ಚಿಲ್ಲ,  5490 ಕೋಟಿ ಸೀತಾರಮನ್ ಬಳಿ ಕೇಳಿಲ್ಲ. ಬಿಜೆಪಿ ಅವರಿಗೆ ನಾಚಿಕೆ ಆಗಬೇಕು, ಬೊಮ್ಮಯಿ ಜಿಎಸ್ಟಿ ಮಂಡಳಿ ಇದ್ದರೂ ಒಂದು ದಿನ ಕೂಡ ಈ ಬಗ್ಗೆ ಕೇಳಿಲ್ಲ. 2019 ರಿಂದ ನಮಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಬಿಜೆಪಿ ಇಂದ ರಾಜ್ಯ ರಕ್ಷಣೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

SCROLL FOR NEXT