ರಾಜ್ಯ

ಪಂಚಮಸಾಲಿ ಮೀಸಲಾತಿ ಹೋರಾಟ: ಅಕ್ಟೋಬರ್ 1 ರಿಂದ ಮತ್ತೆ ಪ್ರತಿಭಟನೆಯ ಎಚ್ಚರಿಕೆ

Manjula VN

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಸೆ.15ರೊಳಗೆ 2ಎ ಮೀಸಲಾತಿ ನೀಡದಿದ್ದರೆ, ಅ.1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿರಂತರ ಧರಣಿ ನಡೆಸುವುದಾಗಿ ಲಿಂಗಾಯತ-ಪಂಚಮಸಾಲಿ ಸಮುದಾಯದ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡಿ, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸಪ್ಟೆಂಬರ್ 15 ರೊಳಗೆ ಪ್ರವರ್ಗ 2ಎ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಆಗಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಕಳೆದ ವಿಧಾನಸಭೆ ಅಧಿವೇಶನದಲ್ಲಿಯೇ ಭರವಸೆ ನೀಡಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಕೂಡಲೇ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಈ ಹಿಂದೆ ಸರ್ಕಾರ ಆರು ತಿಂಗಳ ಸಮಯ ಕೇಳಿದ್ದರು. ಆ ಗಡುವು ಸೆ.15ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಶಿಫಾರಸು ಮಾಡಿ ಸರ್ಕಾರ ನುಡಿದಂತೆ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದುಂಡು ಮೇಜಿನ ಸಭೆ ನಡೆಸಲಾಗಿದೆ. ಸಭೆ ಯಶಸ್ವಿಗೊಂಡಿದ್ದು, ಪ್ರಮುಖ ಐದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಸರ್ಕಾರ ಸೆ.15ರ ಒಳಗೆ ಬೇಡಿಕೆ ಈಡೇರದಿದ್ದರೆ ಅ.1ರಿಂದ ಧರಣಿ ಸತ್ಯಾಗ್ರಹ ಮತ್ತೆ ಮುಂದುವರಿಯಲಿದೆ. ''ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್'' ಧ್ಯೇಯವಾಕ್ಯದಡಿ ಇಷ್ಟಲಿಂಗ ಪೂಜೆ ಮೂಲಕ ಜನಜಾಗೃತಿ ಹಮ್ಮಿಕೊಳ್ಳಲಾಗಿದೆ. ಇದು ಬೀದರ್‌ನಿಂದ ಮಲೆಮಹದೇಶ್ವರ ಬೆಟ್ಟದವರೆಗೆ ನಡೆಯಲಿದೆ ಎಂದು ತಿಳಿಸಿದರು.

ಸರ್ಕಾರ ಹಾಗೂ ಪಂಚಮಸಾಲಿ ಮೀಸಲಾತಿ ಕುರಿತು ಸಂಧಾನಕಾರರಾಗಿ ಮಾತುಕತೆ ನಡೆಸಲು ಸಚಿವ ಸಿಸಿ ಪಾಟೀಲ ಅವರಿಗೆ ಸಭೆಯಲ್ಲಿ ಜವಾಬ್ದಾರಿ ನೀಡಿ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಪಾಟೀಲ ಅವರೇ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ತಮ್ಮನ್ನು ಭೇಟಿ ಮಾಡಿಸಲಿದ್ದಾರೆಂದು ವಿವರಿಸಿದರು. 

SCROLL FOR NEXT