ರಾಜ್ಯ

ಬೆಳಗಾವಿ: ಚೀನಾ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಹಿರಿಯ ನಿವೃತ್ತ ಯೋಧ ವಸಂತ್ ಲಾಡ್ ನಿಧನ 

Sumana Upadhyaya

ಬೆಳಗಾವಿ: ಚೀನಾ ಮತ್ತು 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗಿಯಾಗಿದ್ದ 84 ವರ್ಷದ ಹಿರಿಯ ನಿವೃತ್ತ ಸೇನಾ ಯೋಧ ವಸಂತ್ ಲಾಡ್ ಕಳೆದ ಶುಕ್ರವಾರ ತಡರಾತ್ರಿ ಧಾರವಾಡದ ಸಪ್ತಪುರದ ತಮ್ಮ ನಿವಾಸದಲ್ಲಿ ಅಸುನೀಗಿದ್ದಾರೆ.ಪತ್ನಿ ಮತ್ತು ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.

ಮರಾಠಾ ಲಘು ಪದಾತಿದಳದಲ್ಲಿ ತರಬೇತಿ ಪಡೆದ ನಂತರ, ಲಾಡ್ ಅವರನ್ನು ಸರ್ಕಾರ ಚೆನ್ನೈನಲ್ಲಿ ಮತ್ತು ನಂತರ ನಾಗಾಲ್ಯಾಂಡ್‌ನಲ್ಲಿ ಯುದ್ಧಗಳಲ್ಲಿ ಭಾಗವಹಿಸಲು ನಿಯೋಜಿಸಲಾಗಿತ್ತು. ಬಾಂಗ್ಲಾದೇಶ ವಿಮೋಚನೆಗಾಗಿ 1971 ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ, ಲಾಡ್ ಅಸುನೀಗಿದ್ದರು ಎಂದು ಭಾವಿಸಲಾಗಿತ್ತಂತೆ. ಈ ಬಗ್ಗೆ ಅವರ ಕುಟುಂಬಸ್ಥರಿಗೆ ಅಧಿಕಾರಿಗಳು ಟೆಲಿಗ್ರಾಂ ಮೂಲಕ ಕಳುಹಿಸಿದ್ದರು ಕೂಡ.

ಮೃತಪಟ್ಟರು ಎಂದು ಟೆಲಿಗ್ರಾಂ ಸಂದೇಶ: ಆದರೆ ಲಾಡ್ ಅವರ ತಂದೆ ತಮ್ಮ ಮಗ ತೀರಿಕೊಂಡಿದ್ದಾರೆ ಎಂದು ನಂಬಲಿಲ್ಲವಂತೆ.ಕುಟುಂಬದ ಜ್ಯೋತಿಷಿಯನ್ನು ಭೇಟಿಯಾದರು, ಆಗ ಜ್ಯೋತಿಷ್ಯರು ಲಾಡ್ ಅವರು ಜೀವಂತವಾಗಿದ್ದಾರೆ ಎಂದು ಭರವಸೆ ನೀಡಿದ್ದರಂತೆ. ಕುಟುಂಬಸ್ಥರು ಲಾಡ್ ನಿಧನದ ಸುದ್ದಿ ಬಂದು 13 ನೇ ದಿನದ ಅಂತಿಮ ವಿಧಿ ವಿಧಾನಗಳನ್ನು ಮಾಡುತ್ತಿದ್ದಾಗ ಅವರು ಜೀವಂತವಾಗಿದ್ದಾರೆ ಎಂದು ತಿಳಿಸುವ ಒಂದು ಟೆಲಿಗ್ರಾಂ ಮನೆಗೆ ಬಂದಿತಂತೆ.

13 ನೇ ದಿನದ ಆಚರಣೆಯ ಸಮಯದಲ್ಲಿ ಲಾಡ್‌ ಅವರ ಫೋಟೋಗೆ ಹಾರ ಹಾಕಿ ಸಪ್ತಪುರದಲ್ಲಿ ಇಟ್ಟು ಗ್ರಾಮಸ್ಥರು ವಸಂತ ಲಾಡ್ ಅಮರ್ ರಹೇ ಎಂದು ಘೋಷಣೆಗಳನ್ನು ಕೂಗುತ್ತಿದ್ದರಂತೆ. ಅಚ್ಚರಿಯ ವಿಷಯವೆಂದರೆ ಮಿಲಿಟರಿ ಪ್ರಧಾನ ಕಚೇರಿಯಿಂದ ಆಗ ಟೆಲಿಗ್ರಾಮ್ ಬಂದಿತು. ವಸಂತ್ ಲಾಡ್ ನಿಧನ ಹೊಂದಿಲ್ಲ, ಗೊಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಂದೇಶ ಬಂತು.
ನಂತರ, ನಾರಾಯಣ್ ಲಾಡ್ ಎಂಬ ಇನ್ನೊಬ್ಬ ಸೈನಿಕರು ಯುದ್ಧದಲ್ಲಿ ಮೃತಪಟ್ಟಿದ್ದು, ಅಧಿಕಾರಿಗಳು ಟೆಲಿಗ್ರಾಂನ್ನು ತಪ್ಪಾಗಿ ವಸಂತ್ ಲಾಡ್ ಅವರ ಮನೆಗೆ ಕಳುಹಿಸಿದ್ದರು.

SCROLL FOR NEXT