ರಾಜ್ಯ

ದೇಶದ್ರೋಹ ಪ್ರಕರಣ; ಬಂದೂಕುಗಳನ್ನು ಜೊತೆಗಿಟ್ಟುಕೊಂಡು ಶಾಲಾ ಮಕ್ಕಳ ವಿಚಾರಣೆ ನಿಯಮ ಉಲ್ಲಂಘನೆ: ಹೈಕೋರ್ಟ್

Srinivas Rao BV

ಬೆಂಗಳುರು: ಬೀದರ್ ನಲ್ಲಿ ಶಾಹಿನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಮಕ್ಕಳ ವಿಚಾರಣೆ ವೇಳೆ ಪೊಲೀಸರು ಬಂದೂಕುಗಳನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದು ನಿಯಮಗಳ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ. 

ಈ ರೀತಿ ಮಾಡಿರುವುದನ್ನು ಹೈಕೋರ್ಟ್ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಹೇಳಿದ್ದು, ಈ ರೀತಿಯ ನಿಯಮ ಉಲ್ಲಂಘನೆಗಳು ಮರುಕಳಿಸದಂತೆ ಆದೇಶ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

2020 ರ ಜ.21 ರಂದು ಬೀದರ್ ನ ಶಾಹೀನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 4,5,6 ನೇ ತರಗತಿಯ ವಿದ್ಯಾರ್ಥಿಗಳು ನಾಟಕವೊಂದನ್ನು ವೇದಿಕೆ ಮೇಲೆ ಪ್ರದರ್ಶನ ನೀಡಿದ್ದರು. ಈ ನಾಟಕದಲ್ಲಿ ಸಿಎಎ ಹಾಗೂ ಎನ್ಆರ್ ಸಿಯನ್ನು ಪ್ರಶ್ನಿಸಲಾಗಿತ್ತು. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾದ ಶಬ್ದಗಳನ್ನು ಪ್ರಯೋಗಿಸಲಾಗಿತ್ತು.  ಈ ಹಿನ್ನೆಲೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. 

ಪೊಲೀಸರು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿಚರಣೆಗಾಗಿ ಹಲವು ಬಾರಿ ಶಾಲೆಗೆ ತೆರಳಿದ್ದರು. ಬಂದೂಕುಗಳನ್ನು ಜೊತೆಗಿಟ್ಟುಕೊಂಡು ತೆರಳಿದ್ದ ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಆ.16 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪೊಲೀಸರ ನಡೆ ಮೇಲ್ನೋಟಕ್ಕೆ ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 86(5)ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ. 

ಅಪ್ರಾಪ್ತರ ಪೋಷಕರಿಗೆ ರಿಲೀಫ್ ನೀಡಲು ಅರ್ಜಿದಾರರ ಮನವಿ 

ಅಡ್ವೊಕೇಟ್ ನಯನ ಜ್ಯೋತಿ ಜಾವರ್ ಹಾಗೂ ಇತರರು 2020 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ್ ಓಕಾ ಹಾಗೂ ನ್ಯಾ. ಎನ್ಎಸ್ ಸಂಜಯ್ ಗೌಡ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿತ್ತು. 

ಕ್ರಿಮಿನಲ್ ಇನ್ವೆಸ್ಟಿಗೇಷನ್ ನಲ್ಲಿ ಅಪ್ರಾಪ್ತರನ್ನು ವಿಚಾರಣೆ ನಡೆಸುವಾಗ ಪೊಲೀಸರು ನಿಗದಿತ ನಿಯಮಗಳನ್ನು ಅನುಸರಿಸಲು ಹಾಗೂ ಅಪ್ರಾಪ್ತರ ಹಿತಾಸಕ್ತಿಗಳನ್ನು ಕಾಪಾಡುವಂತೆ ನಿರ್ದೇಶನ ನೀಡಲು ಕೋರ್ಟ್ ಗೆ ಪಿಐಎಲ್ ನಲ್ಲಿ ಮನವಿ ಮಾಡಲಾಗಿತ್ತು ಹಾಗೂ 

ಅಷ್ಟೇ ಅಲ್ಲದೇ ಪೊಲೀಸರ ನಡೆಯಿಂದ ಮಕ್ಕಳ ಪೋಷಕರಿಗೆ ಮಾನಸಿಕ, ಭಾವನಾತ್ಮಕ ಕಿರಿಕಿರಿ ಉಂಟಾಗಿದ್ದು ಪರಿಹಾರ ಕೊಡಿಸುವುದಕ್ಕೂ ಪಿಐಎಲ್ ನಲ್ಲಿ ಮನವಿ ಮಾಡಲಾಗಿತ್ತು. 

ಆದರೆ ಫೆಬ್ರವರಿ 2020 ರಲ್ಲಿ ರಾಜ್ಯ ಸರ್ಕಾರದಿಂದ ಸಲ್ಲಿಕೆಯಾಗಿದ್ದ ಆಕ್ಷೇಪದಲ್ಲಿ "ಪೊಲೀಸರು ಶಾಲೆಗೆ ಭೇಟಿ ನೀಡಿ 17 ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾಗ ಇಲಾಖೆಯ ಸಮವಸ್ತ್ರ ಧರಿಸಿರಲಿಲ್ಲ ಎಂದು ಕೋರ್ಟ್ ಗೆ ಮನವರಿಕೆ ಮಾಡಿತ್ತು. ಆದರೆ ಅರ್ಜಿದಾರರು ಉಲ್ಲೇಖವನ್ನು ವಿವಾದಿಸದ ಪೊಲೀಸ್ ಇಲಾಖೆಯ ಪ್ರಮಾಣ ಪತ್ರ ಅಧ್ಯಯನ ಮಾಡಿದ ಬಳಿಕ ಕೋರ್ಟ್ ಈ ನಿರ್ದೇಶನ ನೀಡಿದೆ. 

SCROLL FOR NEXT