ರಾಜ್ಯ

ಕೋವಿಡ್ ನಿಂದ ಗುಣಮುಖರಾದವರಲ್ಲಿಯೇ ಕ್ಷಯ ರೋಗ ಸಕ್ರಿಯ: ಸಚಿವ ಸುಧಾಕರ್

Lingaraj Badiger

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾದವರಲ್ಲಿಯೇ ಕ್ಷಯ ರೋಗ ಸಕ್ರಿಯವಾಗಿರುವ ಪ್ರಕರಣಗಳು ಪತ್ತೆಯಾಗುತ್ತಿದ್ದು,
ಕೊವಿಡ್‌ನಿಂದ ಗುಣಮುಖರಾದವರಲ್ಲಿ 24 ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ.

ಹೀಗೆ ಕ್ಷಯರೋಗ ಸಕ್ರಿಯತೆ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಧಾಕರ್, ಕ್ಷಯರೋಗದ‌ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ 1716 ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. ಕೊವಿಡ್ ನಿಂದ ಗುಣಮುಖರಾದವರಲ್ಲಿ 24 ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ ಎಂದರು.

ಈ ವರ್ಷ 1.25 ಕೋಟಿ ಜನರ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಕರ್ನಾಟಕ ಸರ್ಕಾರ ದೇಶದಲ್ಲಿಯೇ ವಿನೂತನ ಮಾದರಿಯಲ್ಲಿ ಕ್ಷಯ ಸೋಂಕು ಪತ್ತೆ ಮಾಡುತ್ತಿದೆ. ಸಕ್ರಿಯ ಕ್ಷಯ ರೋಗ ಪ್ರಕರಣಗಳು ಕೊವಿಡ್‌ನಿಂದ ಹೊರ ಬಂದವರಿಂದಲೇ ಬರುತ್ತಿವೆ. ಇದೇ ತಿಂಗಳು 16 ರಿಂದ 30 ರ ವರೆಗೆ ಪರೀಕ್ಷೆ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ 28 ಲಕ್ಷ ಜನರು ಕೋವಿಡ್ ಸೋಂಕಿನಿಂದ ಹೊರ ಬಂದಿದ್ದಾರೆ. ಅವರಲ್ಲಿ ಕಪ್ಪು ಶಿಲೀಂದ್ರ ಪತ್ತೆ ಮಾಡುವ ರೀತಿ ಕ್ಷಯ ರೋಗದ ತಪಾಸಣೆ ಮಾಡಲಾಗುವುದು. ಕ್ಷಯ ರೋಗ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಕೋವಿಡ್ ಕೂಡ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಅದಕ್ಕಾಗಿ ಕ್ಷಯ ವ್ಯಾಪಕವಾಗಿ ಹರಡದಂತೆ ನೋಡಲು ತಪಾಸಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಇತರರಿಗೆ ಕ್ಷಯ ರೋಗ ಶೇ. 33% ರಷ್ಟು ಹೆಚ್ಚಳವಾಗಿದೆ. ಯಾವ ವೃತ್ತಿಯವರಿಗೆ ಈ ರೋಗ ಬರುತ್ತದೆ ಎಂಬುದನ್ನು ನೋಡಿ ತಪಾಸಣೆ ಮಾಡಲಾಗುತ್ತಿತ್ತು. ಈಗ ಕೊವಿಡ್ ನಿಂದ ಗುಣಮುಖರಾದವರ ತಪಾಸಣೆ ಮಾಡಲಾಗುತ್ತಿದೆ. 28 ಲಕ್ಷ ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಕ್ಷಯ ರೋಗ ತಪಾಸಣೆ ಮಾಡಿಕೊಳ್ಳಬೇಕು. ಆರಂಭದಲ್ಲಿಯೇ ಕ್ಷಯ ರೋಗ ಪತ್ತೆಯಾದರೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.

2017ರಲ್ಲಿ ಕ್ಷಯ ರೋಗ ಸಮೀಕ್ಷೆ ನಡೆಸಿದಾಗ ಶೇ. 3.9 ರಷ್ಟು ಜನರಿಗೆ ಕ್ಷಯ ರೋಗ ಪತ್ತೆಯಾಗಿತ್ತು. 2019-20.ರಲ್ಲಿ ಕ್ಷಯ ರೋಗಿಗಳ ಪ್ರಮಾಣ ಕಡಿಮೆಯಾಗಿತ್ತು ಆದರೆ, ಪರೀಕ್ಷೆ ಕಡಿಮೆಯಾಗಿದೆ ಎಂದರು.

ಕ್ಷಯ ರೋಗ ಮುಂದುವರೆದ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ರೋಗ ಅಲ್ಲ. ಆದರೆ, ಕುಟುಂಬದ ಜೊತೆ ಇರುವವರಿಗೆ ಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮುವವರು ಕ್ಷಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ರಾತ್ರಿ ಹೊತ್ತು ಜ್ವರ ಬರುವುದು ತೂಕ ಕಡಿಮೆಯಾಗುವುದು ಕ್ಷಯ ರೋಗದ ಲಕ್ಷಣ. 2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿಗಳು ಗುರಿ ಇಟ್ಟುಕೊಂಡಿದ್ದಾರೆ. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ಥಿಗೆ ಸರ್ಕಾರ 150 ಕೋಟಿ ಬಿಡುಗಡೆ ಮಾಡಲಿದೆ ಎಂದು ಸುಧಾಕರ್ ವಿವರಿಸಿದರು.

SCROLL FOR NEXT