ರಾಜ್ಯ

ಕೆಲ ಜಿಲ್ಲೆಗಳಲ್ಲಿ ವಿವಾಹ, ಅಂತ್ಯಸಂಸ್ಕಾರ ಕಾರ್ಯಕ್ರಮಗಳಿಂದ ಕೋವಿಡ್-19 ಸೋಂಕು ಪ್ರಸರಣ ಹೆಚ್ಚು

Nagaraja AB

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೂ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಕ್ಲಸ್ಟರ್ ಗಳ ರಚನೆ ಆರೋಗ್ಯ ಅಧಿಕಾರಿಗಳನ್ನು ಚಿಂತಿಗೀಡು ಮಾಡಿದೆ. ಇದು ಡೆಲ್ಟಾ ರೂಪಾಂತರ  ಪ್ರಸರಣದೊಂದಿಗೆ ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಹೆಚ್ಚಿನ ಅವಧಿ ಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ನಗರಗಳು ಹಾಗೂ  ಗ್ರಾಮದಲ್ಲಿನ ಕೆಲ ಪ್ರದೇಶಗಳಲ್ಲಿ ಸೋಂಕು ಹರಡುವಿಕೆಗೆ ಕಾರಣವನ್ನು ವಿಶ್ಲೇಷಿಸಿದಾಗ, ಅದು ಮುಖ್ಯ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವುದು, ಜನರು ಮಾಸ್ಕ್ ಧರಿಸದೆ ಆಸ್ಪತ್ರೆಗೆ ಭೇಟಿ, ವಿವಾಹ, ಅಂತ್ಯಸಂಸ್ಕಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು,  ಪೂಜಾ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವುದು ಸೋಂಕಿಗೆ ಮೂಲ ಕಾರಣ ಎಂಬುದು ತಿಳಿದುಬಂದಿದೆ ಎಂದು ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿಗೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನ ಕೊಪ್ಪಲು ಗ್ರಾಮದಲ್ಲಿ ಕೊರೋನಾ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 25 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಇಡೀ ಗ್ರಾಮವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕೋವಿಡ್ ನಿಯಮಗಳ ಹೊರತಾಗಿಯೂ ಅನೇಕ ಗ್ರಾಮಗಳಲ್ಲಿ ಅಂತ್ಯಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸುತ್ತಿದ್ದಾರೆ. ಇದು ಕ್ಲಸ್ಟರ್ ರಚನೆಗೆ ಕಾರಣವಾಗುತ್ತಿದೆ. ಈ ಮಧ್ಯೆ ಪಿಜಿ ಮತ್ತು ಹಾಸ್ಟೆಲ್ ಗಳು ಕೂಡಾ ಹಾಟ್ ಸ್ಪಾಟ್ ಗಳಾಗಿ ರೂಪುಗೊಳ್ಳುತ್ತಿವೆ.

ಇತ್ತೀಚಿಗೆ ಹಾಸ್ಟೆಲ್ ಮತ್ತು ಪಿಜಿಯಲ್ಲಿದ್ದ 100ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ.  ಕೇರಳದಿಂದ ಹಿಂತಿರುಗಿದ ಹಾಸನದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಅಪಾರ್ಟ್ ಮೆಂಟ್ ಗಳು ಮತ್ತು ರೆಸಿಡೆನ್ಸಿಯಲ್ ಸೊಸೈಟಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬರುತ್ತಿವೆ. ಬಿಬಿಎಂಪಿ ವಾರ್ ರೂಮ್ ಪ್ರಕಾರ ಸೋಮವಾರ, 162 ಸೂಕ್ಷ್ಮ ಕಂಟೈನ್ ಮೆಂಟ್ ವಲಯಗಳಿದ್ದು, 88 ಅಪಾರ್ಟ್ ಮೆಂಟ್ ಗಳನ್ನು ಕಂಟೈನ್ ಮೆಂಟ್ ವಲಯಗಳೆಂದು ಘೋಷಿಸಲಾಗಿದೆ. 

ಅಧಿಕಾರಿಗಳು ಮಾರ್ಗಸೂಚಿ ಹೊರಡಿಸುವುದು ಮಾತ್ರವಲ್ಲದೆ ಅವುಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸುವುದು ಅತ್ಯಂತ ಪ್ರಮುಖವಾಗಿದೆ. ಮದುವೆ,  ಅಂತ್ಯಸಂಸ್ಕಾರ ಕಾರ್ಯಕ್ರಮಗಳು, ಪಿಜಿ, ಹಾಸ್ಟೆಲ್ ಗಳು, ರಾಜಕೀಯ ಕಾರ್ಯಕ್ರಮ ಮತ್ತು ಪೂಜಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿರುವುದು ಕ್ಲಸ್ಟರ್ ಗೆ ಕಾರಣವಾಗುತ್ತಿದೆ. ಡೆಲ್ಟಾ ರೂಪಾಂತರ ಪ್ರಸರಣದೊಂದಿಗೆ ಮುಂಜಾಗ್ರತೆ ವಹಿಸದಿದ್ದರೆ ಸೋಂಕು ಬೇಗನೆ ಹರಡಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.  ಜಿಲ್ಲಾಡಳಿತಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಚನೆಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. 

SCROLL FOR NEXT