ರಾಜ್ಯ

ಇದು ಅಧಿಕೃತ: ಸಿಎಂ ಬೊಮ್ಮಾಯಿಗೆ ನಂ.1 ರೇಸ್ ವ್ಯೂ ಕಾಟೇಜ್ ನಿವಾಸ ಹಂಚಿಕೆ

Sumana Upadhyaya

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಸುಮಾರು 20 ದಿನಗಳು ಕಳೆದ ನಂತರ ಬಸವರಾಜ ಬೊಮ್ಮಾಯಿಯವರಿಗೆ ಅಧಿಕೃತ ನಿವಾಸ ಸಿಕ್ಕಿದೆ. ಈ ಸಂಬಂಧ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು ಸಿಎಂ ಅವರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಿವಾಸ ಹಂಚಿಕೆಯಾಗಿದೆ.

ಸದ್ಯ ಈ ನಿವಾಸದಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಅವರು ಇರುವುದರಿಂದ ಸಿಎಂ ಬೊಮ್ಮಾಯಿಯವರು ಅಲ್ಲಿಗೆ ಶಿಫ್ಟ್ ಆಗಲು ಕೆಲ ದಿನಗಳು ಹಿಡಿಯಬಹುದು. ಅಶ್ವಥ್ ನಾರಾಯಣ ಅವರು ಕ್ರೆಸೆಂಟ್ ರಸ್ತೆಯಲ್ಲಿ ಬಂಗಲೆ ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅವರಿಗೆ ಸರಿಯಾದ ಮನೆ ಸಿಕ್ಕಿ ಅಲ್ಲಿಗೆ ವರ್ಗವಾದ ನಂತರ ರೇಸ್ ವ್ಯೂ ಕಾಟೇಜ್ ನಲ್ಲಿ ಸಿಎಂ ಬೊಮ್ಮಾಯಿಯವರು ತಂಗಲಿದ್ದಾರೆ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ಈ ಮೂಲಕ ನಾಡಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಅನುಗ್ರಹ ಮತ್ತು ಕಾವೇರಿಯಿಂದ ಹೊರಗೆ ವಾಸ ಮಾಡಿದ ಸಿಎಂಗಳ ಪಟ್ಟಿಗೆ ಬಸವರಾಜ ಬೊಮ್ಮಾಯಿಯವರು ಸೇರ್ಪಡೆಯಾಗಲಿದ್ದಾರೆ. ಕಳೆದ 25 ವರ್ಷಗಳಲ್ಲಿ 1994ರಿಂದ ಹೆಚ್ ಡಿ ದೇವೇಗೌಡರಿಂದ ಹಿಡಿದು ಕಳೆದ ತಿಂಗಳು ಬಿ ಎಸ್ ಯಡಿಯೂರಪ್ಪನವರೆಗೆ ಎಲ್ಲರೂ ಈ ಎರಡು ಬಂಗಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇವೆರಡೂ ಮನೆಗಳು ಬ್ರಿಟಿಷ್ ಆಳ್ವಿಕೆ ಸಮಯದಲ್ಲಿ ನಿರ್ಮಿಸಿದ್ದವುಗಳಾಗಿವೆ. ಕಳೆದ ಬಾರಿ ಹೆಚ್ ಡಿ ಕುಮಾರಸ್ವಾಮಿಯವರು ಮಾತ್ರ ತಮ್ಮ ಖಾಸಗಿ ನಿವಾಸ ಜೆ ಪಿ ನಗರದಲ್ಲಿಯೇ ವಾಸಿಸುತ್ತಿದ್ದರು. ಆದರೆ 2006-07ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುಗ್ರಹದಲ್ಲಿ ತಮ್ಮ ಅಧಿಕೃತ ವಾಸವನ್ನು ಮಾಡಿದ್ದರು.

ಕೆಲವರಿಗೆ ಅನುಗ್ರಹದಲ್ಲಿದ್ದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯಿಂದ ಕಾವೇರಿ ನಿವಾಸವನ್ನು ಆರಿಸಿಕೊಳ್ಳುತ್ತಿದ್ದರು. ಪ್ರಸ್ತುತ, 'ಅನುಗ್ರಹ'ದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು ನೆಲೆಸಿದ್ದಾರೆ. ಕುಮಾರ ಕೃಪಾ ರಸ್ತೆಯಲ್ಲಿರುವ ಸಿಎಂ ಗೃಹ ಕಚೇರಿ ‘ಕೃಷ್ಣ’ದ ಪಕ್ಕದಲ್ಲಿ‘ ಕಾವೇರಿ ’ಮತ್ತು‘ ಅನುಗ್ರಹ ’ಇವೆರಡೂ ಇವೆ. ಅಲ್ಲದೆ, ಮುಖ್ಯ ರಸ್ತೆಯನ್ನು ಬಳಸದೆ ಸಿಎಂ 'ಕಾವೇರಿ' ಮತ್ತು 'ಅನುಗ್ರಹ' ಎರಡರಿಂದಲೂ 'ಕೃಷ್ಣ'ಕ್ಕೆ ನಡೆದುಕೊಂಡು ಹೋಗುವ ದೂರವಷ್ಟೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಿಗಾಗಿ ಯಾವುದೇ ಅಧಿಕೃತ ಬಂಗಲೆ ಇಲ್ಲ. ವರ್ಷಗಳು ಕಳೆದಂತೆ ಸಿಎಂಗಳು ತಮ್ಮ ಆಯ್ಕೆಯ ಬಂಗಲೆಗಳಲ್ಲಿ ನೆಲೆಸುತ್ತಿದ್ದಾರೆ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸದಾಶಿವನಗರದಲ್ಲಿರುವ ಅವರ ಖಾಸಗಿ ನಿವಾಸ ‘ಕೃತಿಕಾ’ದಲ್ಲಿ ಉಳಿದಿದ್ದರೆ, ಎಸ್ ಬಂಗಾರಪ್ಪ ಮತ್ತು ಆರ್ ಗುಂಡುರಾವ್ ಅವರು ಕುಮಾರ ಕೃಪಾ ರಸ್ತೆಯಲ್ಲಿರುವ ಬಂಗಲೆಯಲ್ಲಿ ವಾಸಿಸುತ್ತಿದ್ದರು, ಅದರಲ್ಲಿ ಈಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಸಿಸುತ್ತಿದ್ದಾರೆ. ಯಡಿಯೂರಪ್ಪನವರು 'ಕಾವೇರಿ'ಯಲ್ಲಿ ವಾಸಿಸುತ್ತಿದ್ದಾರೆ. ಬೊಮ್ಮಾಯಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಆರ್ ಟಿ ನಗರದ ತಮ್ಮ ಖಾಸಗಿ ನಿವಾಸದಿಂದ ಕೆಲಸ ಮುಂದುವರಿಸಿದ್ದರು.

ಮುಖ್ಯಮಂತ್ರಿಗಳು ಮತ್ತು ಅವರ ಮನೆಗಳು: ಅನುಗ್ರಹದಲ್ಲಿ ಎಚ್ ಡಿ ದೇವೇಗೌಡ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರಂ ಸಿಂಗ್, ಡಿ.ವಿ.ಸದಾನಂದ ಗೌಡ, ಎಚ್.ಡಿ.ಕುಮಾರಸ್ವಾಮಿ (ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ) ವಾಸಿಸುತ್ತಿದ್ದರು.

ಕಾವೇರಿಯಲ್ಲಿ ಜೆಎಚ್ ಪಟೇಲ್, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ವಾಸಿಸಿದ್ದರು. 

SCROLL FOR NEXT