ರಾಜ್ಯ

ಅಪ್ರಾಮಾಣಿಕ ಪೊಲೀಸರನ್ನು ಸಹಿಸುವುದಿಲ್ಲ: ಆರಗ ಜ್ಞಾನೇಂದ್ರ

Shilpa D

ಬೆಂಗಳೂರು: ಅಪ್ರಾಮಾಣಿಕ ಮತ್ತು ಅಶಿಸ್ತಿನ ಪೊಲೀಸ್‌ ಸಿಬ್ಬಂದಿಯನ್ನು ಯಾವ ಕಾರಣಕ್ಕೂ ನಾನು ಸಹಿಸುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು. 

ಪೊಲೀಸ್ ಇಲಾಖೆ ವತಿಯಿಂದ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಳವು ಮತ್ತು ಜಪ್ತಿ ಮಾಡಿದ ವಸ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಸ್ವತ್ತು ಹಿಂತಿರುಗಿಸುವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಅಪರಾಧ ಪ್ರಕರಣಗಳಲ್ಲಿ ಪೊಲೀಸರೂ ಭಾಗಿಯಾಗಿದ್ದಾರೆ ಎಂದಾಗ ಅಂತಹವರ ಮೇಲೆ ಅಸಹ್ಯ ಮೂಡುತ್ತದೆ. ಇದು, ಪ್ರಾಮಾಣಿಕ ಪೊಲೀಸ್ ವೃಂದಕ್ಕೂ ಕಪ್ಪು ಚುಕ್ಕೆ. ಹಾಗಾಗಿ, ಅಪ್ರಾಮಾಣಿಕ ಪೊಲೀಸರ ಪಟ್ಟಿ ಸಿದ್ಧಪಡಿಸಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟಬುತ್ತಿ. ವರ್ಗಾವಣೆ ವ್ಯವಸ್ಥೆಯಲ್ಲೂ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಣಕ್ಕೆ ತರಲಾಗುವುದು’ ಎಂದರು.

ಯಾರು ಕೆಟ್ಟರೂ ತೊಂದರೆಯಾಗುವುದಿಲ್ಲ. ಆದರೆ, ಒಬ್ಬ ಪೊಲೀಸ್ ತಪ್ಪು ದಾರಿ ಹಿಡಿದಾಗ, ಸಮಾಜದ ಮೇಲೆ ಬಹಳ
ದೊಡ್ಡ ದುಷ್ಪರಿಣಾಮ ಬೀರುತ್ತದೆ. ಹಣದ ದಾಸರಾಗಿ ಅದರ ಹಿಂದೆ ಹೋಗಬೇಡಿ. ಅಪರಾಧಿಗಳನ್ನು ಪೋಷಿಸುವ ಕೆಲಸ ಮಾಡದೆ, ಅವರನ್ನು ಹತ್ತಿಕ್ಕಬೇಕು’ ಎಂದು ಕಿವಿಮಾತು ಹೇಳಿದರು

ಹಲವಾರು ಸೂಕ್ಷ್ಮ ಪ್ರಕರಣಗಳಲ್ಲಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಜ್ಞಾನೇಂದ್ರ, ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳನ್ನು ಮಾಡುತ್ತಿರುವ ಅಪರಾಧಿಗಳಿಗಿಂತ ಈ ಪಡೆ ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  56 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದು 32 ಕೋಟಿ ಮೌಲ್ಯದ ಔಷಧಗಳನ್ನು ಪ್ರದರ್ಶಿಸಲಾಯಿತು. 18 ಸಂತ್ರಸ್ತರಿಗೆ ಸಾಂಕೇತಿಕವಾಗಿ  ಗೃಹಸಚಿವರು ಹಿಂದಿರುಗಿಸಿದರು. ಇದೇ ವೇಳೆ400 ಪೊಲೀಸ್ ಸಿಬ್ಬಂದಿಗೆ 18 ಲಕ್ಷ ಬಹುಮಾನ ಘೋಷಿಸಿದರು.. 

SCROLL FOR NEXT