ರಾಜ್ಯ

ವಿದೇಶದಲ್ಲಿ ಉದ್ಯೋಗದ ಆಮಿಷ: ನಕಲಿ ಉದ್ಯೋಗ ಸಂಸ್ಥೆಗಳಿಂದ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ದುರುಪಯೋಗ 

Harshavardhan M

ಬೆಂಗಳೂರು: ಸದ್ಯದ ಕೊರೊನಾ ಸಾಂಕ್ರಾಮಿಕದಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದೇ ಪರಿಸ್ಥಿತಿಯನ್ನು ನಕಲಿ ವಿದೇಶಿ ಉದ್ಯೋಗ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ರಾಜ್ಯ ವಲಸಿಗರ ರಕ್ಷಣಾ ಕಚೇರಿ ಎಚ್ಚರಿಕೆ ನೀಡಿದೆ. ಅಮಾಯಕರನ್ನು ವಂಚಿಸಲೆಂದೇ ನೂರಾರು ನಕಲಿ ಉದ್ಯೋಗಾವಕಾಶ ಸಂಸ್ಥೆಗಳು ಸೃಷ್ಟಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದು, ಉದ್ಯೋಗ ನೀಡದೆ ವಂಚನೆ ನಡೆಸಲಾಗುತ್ತಿದೆ. 

ಇಂಥಾ ನಕಲಿ ಉದ್ಯೋಗ ಸಂಸ್ಥೆಗಳ ಮೇಲೆ ಬೆಂಗಳೂರಿನಲ್ಲಿರುವ ರಾಜ್ಯ ವಲಸಿಗರ ರಕ್ಷಣಾ ಕಚೇರಿ ನಿಗಾ ಇರಿಸಿದೆ. ಇತ್ತೀಚಿಗಷ್ಟೆ ಕಚೇರಿಯ ಅಧಿಕಾರಿಗಳು ತಮ್ಮ ಗಮನಕ್ಕೆ ಬಂದಿರುವ ನಕಲಿ ಉದ್ಯೋಗ ಸಂಸ್ಥೆಗಳ ಪಟ್ಟಿಯನ್ನು ನಗರ ಪೊಲೀಸ್ ಆಯುಕ್ತರಿಗೆ ತಲುಪಿಸಿದೆ. ಪೊಲೀಸರು ವಿವಿಧ ಇಲಾಖೆಗಳ ಸಹಾಯದಿಂದ ಅಕ್ರಮ ಉದ್ಯೋಗ ಏಜೆನ್ಸಿಗಳ ಪತ್ತೆಗಾಗಿ ಜಾಲ ಬೀಸಿದೆ. 

ಮಂಗಳೂರು ನಗರ ಪೊಲೀಸರು ನಗರದಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಉದ್ಯೋಗ ಸಂಥೆಗಳ ಮಾಹಿತಿಯನ್ನು ಸಾರ್ವಜನಿವಾಗಿ ಬಹಿರಂಗಗೊಳಿಸಿದ್ದರು. ಆ ನಂತರ ಹಲವು ಉದ್ಯೋಗ ಸಂಸ್ಥೆಗಳಿಂದ ವಂಚನೆಗೊಳಗಾದ ನೂರಾರು ಮಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಗ್ಯಾಂಗ್ ಒಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು ತಿಳಿದುಬಂದಿತ್ತು. ಈ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು. ಈ ತಂಡದ ಸದಸ್ಯರು ಅಭ್ಯರ್ಥಿಗಳಿಗೆ ಆಸ್ಟ್ರೇಲಿಯ ಮತ್ತು ಲಿಥುವೇನಿಯಾ ದೇಶಗಳಲ್ಲಿ ನರ್ಸಿಂಗ್ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಹಣ ಪಡೆದು ಪರಾರಿಯಾಗುತ್ತಿದ್ದರು.

ಎಲ್ಲರಿಗೂ ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಸಂಪಾದಿಸುವ ಆಸೆ ಇರುತ್ತದೆ. ಅದನ್ನು ಬಳಸಿಕೊಳ್ಳುವ ನಕಲಿ ಉದ್ಯೋಗ ಸಂಸ್ಥೆಯ ವಂಚಕರು, ಆಫೀಸ್ ಬಾಯ್ ಆಗಿದ್ದವರಿಗೆ ಮ್ಯಾನೇಜರ್ ಹುದ್ದೆ ಕೊಡಿಸುವ ಆಮಿಷ ಒಡ್ಡುತ್ತಾರೆ. ಅದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.

SCROLL FOR NEXT