ರಾಜ್ಯ

ಪತ್ರಕರ್ತನಿಂದ ಹಣಕ್ಕೆ ಬೆದರಿಕೆ: ಉದ್ಯಮಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು

Shilpa D

ಬೆಂಗಳೂರು: ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಮಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಉದ್ಯಮಿಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ.

ರಾಜಾಜಿನಗರದ ಸಂಜಯ್ ಎಂಬುವರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸೋಮವಾರ ದೂರು ನೀಡಿದ್ದಾರೆ. ಮಲ್ಲೇಶ್ವರಂ ನ 7ನೇ ಕ್ರಾಸ್ ನಿವಾಸಿ ಯೂಸೂಫ್ ಗೆ ನಾನು 1.50 ಕೋಟಿ ರು ಹಣ ನೀಡಿದ್ದೆ, ಆದರೆ ಆತ ವಾಪಸ್ ನೀಡಿರಲಿಲ್ಲ, ಈ ನಡುವೆ ಹೇಮಂತ್ ಎಂಬಾತ ಮಧ್ಯಸ್ಥಿಕೆ ವಹಿಸಿದ್ದ.

ಆಗಸ್ಟ್ 1 ರಂದು ಕರೆ ಮಾಡಿದ ಹೇಮಂತ್, ಯೂಸೂಫ್ ನಿವಾಸಕ್ಕೆ ಬರುವಂತೆ ಹೇಳಿದ್ದ, ಅದರಂತೆ ನಾನು ಅಲ್ಲಿಗೆ ಹೋಗಿದ್ದೆ, ಒಂದೂವರೆ ಕೋಟಿ ರು ಹಣ ನೀಡುವಂತೆ ಯೂಸೂಫ್ ಗೆ ತಾನು ಮನವೊಲಿಸಿರುವುದಾಗಿ ಹೇಳಿದ ಹೇಮಂತ್ ಪ್ರಕರಣ ಇತ್ಯರ್ಥ ಮಾಡಿದ್ದಕ್ಕಾಗಿ 20 ಲಕ್ಷ ರು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಒಂದು ವೇಳೆ ಹಣ ನೀಡದಿದ್ದರೇ, ಫೇಕ್ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೆದರಿಕೆ ಹಾಕಿದ್ದ ಎಂದು ಸಂಜಯ್ ಆರೋಪಿಸಿದ್ದಾರೆ.

ಕೂಡಲೇ ನಾನು 15 ಲಕ್ಷ ರು ಹಣ ವ್ಯವಸ್ಥೆ ಮಾಡಿ ನೀಡಿದ್ದೆ. ಆದರೆ ಉಳಿದ 5 ಲಕ್ಷ ರು ಹಣವನ್ನು ನೀಡುವಂತೆ, ಇಲ್ಲದಿದ್ದರೇ ಜೈಲಿಗೆ ಕಳುಹಿಸಿವುದಾಗಿ ಬೆದರಿಕೆ ಹಾಕಿದ್ದ. ತಾನು ಪ್ರಾದೇಶಿಕ ನ್ಯೂಸ್ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಹಲವು ಪೊಲೀಸರು ತನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ.

ಗೃಹ ಸಚಿವರು ತನಗೆ ಆತ್ಮೀಯರು ಎಂದು ಹೇಳಿದ್ದ. ಆತ ಯೂಸುಫ್ ಜೊತೆ ಸಂಪರ್ಕ ಹೊಂದಿದ್ದಾನೆ. ಯೂಸುಫ್ ದುಬೈಗೆ ಪಲಾಯನ ಮಾಡುವ ಸಾಧ್ಯತೆಯಿದೆ, ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಜಯ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

SCROLL FOR NEXT