ರಾಜ್ಯ

ಆರ್ ಎಸ್ ಎಸ್ ಬಗ್ಗೆ ಧ್ರುವನಾರಾಯಣ ಹೇಳಿಕೆ ಬೌದ್ಧಿಕ ದಿವಾಳಿತನ, ವಿದ್ಯುತ್ ದರ ನಿಗದಿ ಸರ್ಕಾರದ ಕೈಯಲ್ಲಿಲ್ಲ: ಸಚಿವ ಸುನಿಲ್ ಕುಮಾರ್ 

Sumana Upadhyaya

ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಬಗ್ಗೆ ಕಾಂಗ್ರೆಸ್ ನಾಯಕ ಆರ್. ಧ್ರುವನಾರಾಯಣ್ ನೀಡಿರುವ ಹೇಳಿಕೆ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಇಂಧನ ಹಾಗೂ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿಂದು ಮಾತನಾಡಿದ ಅವರು, ಆರ್‌ಎಸ್‌ಎಸ್‌ ಅಂದ್ರೆ ತ್ಯಾಗ, ಬಲಿದಾನ, ಸೇವೆ, ಸರಳತೆಯ ಸಂಕೇತ. ಇದನ್ನು ತಿಳಿಯದೆ ಸಂಬಂಧವಿಲ್ಲದ ಹೇಳಿಕೆ ನೀಡುವುದು ಹುಚ್ಚುತನವಾಗುತ್ತದೆ. ಆರ್ ಎಸ್ ಎಸ್ ಬಗ್ಗೆ ಮಾತಾಡುವ ಮುನ್ನ ಅದರ ಬಗ್ಗೆ ತಿಳಿಯಬೇಕು ಎಂದು ಪ್ರತಿಕ್ರಿಯಿಸಿದರು.

ರಾಹುಲ್ ಗಾಂಧಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಕೀಳುಮಟ್ಟದ ಪದ ಬಳಕೆ ಬಗ್ಗೆ ಕೇಳಿದಾಗ ಯಾರು ಕೂಡ ಬೇರೆಯವರ ಬಗ್ಗೆ ಟೀಕೆ ಮಾಡುವಾಗ ಎಲ್ಲೆ ಮೀರಬಾರದು, ನಾನು ಈ ವಿಚಾರದಲ್ಲಿ ಅತ್ಯಂತ ಎಚ್ಚರಿಕೆ ವಹಿಸುತ್ತೇನೆ, ಯತ್ನಾಳ್ ಅವರು ಹೀಗೆ ಏಕೆ ಹೇಳಿದರು ಎಂದು ಅವರಲ್ಲಿಯೇ ಕೇಳಬೇಕು ಎಂದರು.

ವಿದ್ಯುತ್ ದರ ನಿಗದಿ: ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ನಿಗಮಗಳ ಖಾಸಗೀಕರಣ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ. ಕೇಂದ್ರದ ಬಿಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ವಿದ್ಯುತ್ ದರ ಏರಿಕೆ ಕೂಡ ಸರ್ಕಾರದ ಕೈಯಲ್ಲಿ ಇಲ್ಲ. ಇದು ವಿದ್ಯುತ್ ಸರಬರಾಜು ಮಾಡುವವರ ತೀರ್ಮಾನವಾಗಿರುತ್ತದೆ. ಇದರ ಬಗ್ಗೆ ಸರ್ಕಾರ ಏನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗಣೇಶೋತ್ಸವ ಆಚರಣೆ: ಈ ಬಾರಿ ಕೊರೋನಾ ಆತಂಕ ನಡುವೆ ಅದ್ದೂರಿ ಗಣೇಶೋತ್ಸವ ಆಚರಣೆ ಬಗ್ಗೆ ಕೇಳಿದಾಗ, ನಾನು ಸರ್ಕಾರದ ಸಚಿವನಾಗಿದ್ದೇನೆ. ನಮ್ಮ ಸರ್ಕಾರದ ಜವಾಬ್ದಾರಿ ಇರುವುದು ಕೊರೊನಾ ನಿಯಂತ್ರಣ ಮಾಡುವುದು. ಕಾನೂನು ಮಾಡುವುದು ದೊಡ್ಡದಲ್ಲ ಜನ ಸಹಕಾರ ಕೊಡಬೇಕು. ಜನ ಸಹಕಾರ ಕೊಟ್ಟರೆ ಕೊರೊನಾ ನಿಯಂತ್ರಣ ಮಾಡಬಹುದು. ಹಾಗಂತ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಬಾರದಾ? ಅಂತಾ ಕೇಳಿದರೆ ವೈಭವೀಕರಣ ಎಲ್ಲಾ ಇರಬೇಕು ಸರಿ. ಆದ್ರೆ ಯಾವೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ಸಂಘ ಸಂಸ್ಥೆಗಳು ಧಾರ್ಮಿಕ‌ ಮುಖಂಡರು ತೀರ್ಮಾನಿಸಬೇಕು. ಕೊರೊನಾ ಏರಿಕೆಯ ಗತಿ ಗಮನದಲ್ಲಿ ಇಟ್ಟುಕೊಂಡು ನಿಯಮ ಸಡಿಲಿಕೆ‌ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ ಎಂದು ಹೇಳಿದರು.

SCROLL FOR NEXT