ರಾಜ್ಯ

ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಆರೋಪಿಗಳ ಪತ್ತೆಗೆ ಪೊಲೀಸರ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ

Sumana Upadhyaya

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಇದುವರೆಗೆ ಆರೋಪಿಗಳ ಪತ್ತೆಯಾಗಿಲ್ಲ. ಇಂದು ಸಂಜೆ ಮೈಸೂರಿಗೆ ತೆರಳುತ್ತೇನೆ. ನಾಳೆ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ ಎಂದು ಹೇಳಿದರು.

ಮೊನ್ನೆ ಮಂಗಳವಾರ ಸಾಯಂಕಾಲ 7.30-8 ಗಂಟೆ ಸುಮಾರಿಗೆ ಯುವತಿ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದು ಅಂದು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕಿದ್ದು ಮರುದಿನ ಅಂದರೆ ನಿನ್ನೆ ಮಧ್ಯಾಹ್ನ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಘಟನೆ ನಡೆದ ಬಳಿಕ ಯುವತಿ ಮತ್ತು ಆಕೆಯ ಜೊತೆಗಿದ್ದ ಯುವಕ ಸಂಪೂರ್ಣ ಆಘಾತಕ್ಕೊಳಗಾಗಿರುವುದರಿಂದ ಸಂಪೂರ್ಣವಾಗಿ ಅವರ ಹೇಳಿಕೆಯನ್ನು ತಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುವತಿಯ ಹೇಳಿಕೆಯನ್ನು ಇನ್ನೂ ಪಡೆದಿಲ್ಲ, ಆಕೆ ಆಸ್ಪತ್ರೆಯಲ್ಲಿದ್ದಾರೆ. ಎಫ್ ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿ ಪ್ರತಾಪ್ ರೆಡ್ಡಿಯವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದರು.

ಮೈಸೂರಿನ ನಗರ ಪೊಲೀಸ್ ಆಯುಕ್ತರು ಪೊಲೀಸರ ವಿವಿಧ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದಷ್ಟು ಶೀಘ್ರವೇ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡು ಸೂಕ್ತ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದೇನೆ. ಘಟನೆ ತನಿಖೆಯಲ್ಲಿರುವುದರಿಂದ ಹೆಚ್ಚಿನ ವಿವರ ಹೇಳಲು ಸಾಧ್ಯವಿಲ್ಲ ಎಂದರು.

ಅತ್ಯಾಚಾರಕ್ಕೀಡಾದ ಯುವತಿಯ ಪೋಷಕರು ಮಹಾರಾಷ್ಟ್ರ ಮುಂಬೈ ಮೂಲದವರಾಗಿದ್ದು ಈಗಾಗಲೇ ರಾಜ್ಯಕ್ಕೆ ಬಂದಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ ಎಂದರು.

ಮೈಸೂರು ನಗರ ಪ್ರವಾಸೋದ್ಯಮ ಸ್ಥಳವಾಗಿದ್ದು ಹಲವಾರು ಮಂದಿ ಹೊರಗಿನಿಂದ ಪ್ರತಿನಿತ್ಯ ಬರುತ್ತಿರುತ್ತಾರೆ. ಈ ಘಟನೆ ದುರದೃಷ್ಟಕರ. ಇಂತಹ ಘಟನೆಗಳನ್ನು ಕಾಂಗ್ರೆಸ್ ನವರು ರಾಜಕೀಯಗೊಳಿಸಬಾರದು, ಎಲ್ಲರೂ ಸೇರಿ ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ಪುನರಾವರ್ತಿಸದಂತೆ ಕ್ರಮ ಕೈಗೊಳ್ಳಬೇಕು, ಹಿಂದಿನ ಕಾಂಗ್ರೆಸ್ ಸರ್ಕಾರವಿರುವಾಗ ಇಂತಹ ಘಟನೆ ನಡೆದಿರಲಿಲ್ಲವೇ ಎಂದು ಗೃಹ ಸಚಿವರು ಪ್ರಶ್ನಿಸಿದರು.

SCROLL FOR NEXT