ರಾಜ್ಯ

ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತಪ್ಪಿದೆ, ಆಂಧ್ರದಂತೆ ಇಲ್ಲಿ ಕೂಡ ಕಠಿಣ ಕ್ರಮ ಕೈಗೊಳ್ಳಿ: ಕುಮಾರಸ್ವಾಮಿ

Sumana Upadhyaya

ರಾಮನಗರ: ಮೈಸೂರಿನಲ್ಲಿ ನಡೆದ ಅಮಾನವೀಯ, ಅನಾಗರಿಕ ಗ್ಯಾಂಗ್ ರೇಪ್ ಪ್ರಕರಣ ನಡೆಯಬಾರದಾಗಿತ್ತು, ನಡೆದು ಹೋಗಿದೆ, ಇಲ್ಲಿ ಸರ್ಕಾರದ ತಪ್ಪಿದೆ, ಸರ್ಕಾರದ ವೈಫಲ್ಯವಿದೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಮಾಯಕರ ವಿರುದ್ಧ ಪೊಲೀಸರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿವೆ. ಸಾರ್ವಜನಿಕವಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ ಮಾಡಲು ಸ್ವೇಚ್ಛಾಚಾರವಾಗಿ ಬಿಡುವುದೇ ಸರ್ಕಾರದ ಗೃಹ ಇಲಾಖೆಯ ವೈಫಲ್ಯವಾಗಿದೆ. ಮೊನ್ನೆ ಮದ್ಯಪಾನ ಮಾಡಿ ಮೈಮರೆತ ಯುವಕರು ಮೈ ಮೇಲೆ ಪ್ರಜ್ಞೆಯಿಲ್ಲದೆ ಇಂತಹ ಪರಿಸ್ಥಿತಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದರು.

ರಾಜ್ಯದ ಅನೇಕ ಕಡೆಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದನ್ನು ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆ ಅಸಮರ್ಥವಾಗಿದೆ. ಹಣ ವಸೂಲಿ ಮಾಡಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡುವುದನ್ನು ನಿಲ್ಲಿಸುವವರೆಗೆ ಇಲಾಖೆ ನಿಷ್ಕ್ರಿಯವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಉತ್ತರ ಪ್ರದೇಶ, ದೆಹಲಿಯಲ್ಲಿ ಇಂತಹ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂತಹ ಅಮಾನುಷ ಘಟನೆಗಳು ನಮ್ಮ ರಾಜ್ಯದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದ್ದು ನಿಜಕ್ಕೂ ಆಘಾತಕರಿ ಸಂಗತಿ. ಕಳೆದ ಬಾರಿ ಆಂಧ್ರ ಪ್ರದೇಶದಲ್ಲಿ ಒಬ್ಬ ಯುವತಿ ಮೇಲೆ ಅತ್ಯಾಚಾರ ನಡೆಯಿತು, ಪೊಲೀಸರು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದರು, ಅಲ್ಲಿಯ ಪೊಲೀಸರ ಕ್ರಮವನ್ನು ನಾನು ಮೆಚ್ಚುತ್ತೇನೆ. ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು.

ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತಾರೆ, ಕೆಲವು ಸಮಯ ಕಳೆದ ನಂತರ ಜಾಮೀನು ಮೇಲೆ ಹೊರಬರುತ್ತಾರೆ, ಆರೋಪಿಗಳಿಗೆ ಇದು ಕಠಿಣ ಶಿಕ್ಷೆಯಾಗುವುದಿಲ್ಲ, ಸರ್ಕಾರ ಆರಂಭದಲ್ಲಿಯೇ ಚಿವುಟಿ ಹಾಕುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಖಂಡಿತಾ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಾಯಿಸಿದರು. 

SCROLL FOR NEXT