ರಾಜ್ಯ

3 ದಿನವಾದರೂ ಮೈಸೂರು ಗ್ಯಾಂಗ್ ರೇಪ್ ಆರೋಪಿಗಳು ಸಿಕ್ಕಿಲ್ಲ: ಗೃಹ ಸಚಿವರ ನಡೆಗೆ ಆಕ್ರೋಶ 

Sumana Upadhyaya

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ ವಿವಾದಕ್ಕೆ-ಟೀಕೆಗೆ ಗುರಿಯಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವರ್ತನೆ ಮತ್ತಷ್ಟು ಚರ್ಚೆ, ಟೀಕೆಗಳಿಗೆ ಎಡೆಮಾಡಿಕೊಟ್ಟಿದೆ.

ಇಡೀ ರಾಜ್ಯಾದ್ಯಂತ ಗ್ಯಾಂಗ್ ರೇಪ್ ಪ್ರಕರಣ ಬಗ್ಗೆ ಆಕ್ರೋಶ, ಸರ್ಕಾರ, ಪೊಲೀಸ್ ಇಲಾಖೆ ಬಗ್ಗೆ ಟೀಕೆ ಕೇಳಿಬರುತ್ತಿರುವಾಗ ಗೃಹ ಸಚಿವರು ಮಾತ್ರ ಇಂದು ಕಾಟಾಚಾರಕ್ಕೆ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ನೋಡಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಮ್ಮ ಕಾರು, ಬೆಂಗಾವಲು ವಾಹನ, ಪೊಲೀಸ್ ಅಧಿಕಾರಿಗಳೊಂದಿಗೆ ಬಂದ ಗೃಹ ಸಚಿವರು ಕೇವಲ ಹತ್ತೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ರಸ್ತೆ ಬದಿ ನಿಂತು ಆ ಕಡೆ ಈ ಕಡೆ ನೋಡಿ, ಪೊಲೀಸ್ ಕಮಿಷನರ್ ರಿಂದ ಮಾಹಿತಿ ಪಡೆದು ಹೋಗಿದ್ದಾರೆ.ಕೇವಲ ಪ್ರಚಾರಕ್ಕೆ, ಫೋಟೋ-ವಿಡಿಯೊಕ್ಕೆ ಫೋಸ್ ಕೊಡಲು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಅಲ್ಲಿಂದ ಅಗ್ನಿಶಾಮಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಗೃಹ ಸಚಿವರು ಅಗ್ನಿಶಾಮಕ ಶಸ್ತ್ರಾಸ್ತ್ರ ತರಬೇತಿ ಸಿಮ್ಯುಲೇಟರ್‌ನ್ನು ಪರಿಶೀಲಿಸಿದ್ದಾರೆ. ಅಂದರೆ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಗೃಹ ಸಚಿವರು ಪರಗಣಿಸುತ್ತಿಲ್ಲವೇ ಎಂಬಂತಿದೆ ಅವರ ನಡೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇನ್ನು ಗೃಹ ಸಚಿವರ ಕಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ನೋಡಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.

SCROLL FOR NEXT