ರಾಜ್ಯ

6 ಕೋಟಿಗೆ ಕಿಡ್ನಿ ಮಾರಲು 2 ಲಕ್ಷ ಕಮಿಷನ್ ಕೊಟ್ಟು ಮೋಸ ಹೋದ ಅಮಾಯಕರು

Harshavardhan M

ಬೆಂಗಳೂರು: ಅತಿ ದೊಡ್ಡ ಸೈಬರ್ ವಂಚನೆ ಜಾಲವನ್ನು ಬೆಂಗಳೂರಿನಲ್ಲಿ ಬಯಲಿಗೆಳೆಯಲಾಗಿದೆ. ಈ ಸೈಬರ್ ಜಾಲದ ಆರೋಪಿಗಳು ಅಮಾಯಕರಿಗೆ ಕರೆ ಮಾಡಿ ಬೆಂಗಳೂರಿನ ಪ್ರತಿಷ್ಟಿತ ಬೆಂಗಳೂರು ಬ್ಯಾಪ್ಟಿಸ್ಟ್ ಹಾಸ್ಪಿಟಲ್ ನಲ್ಲಿ ರೋಗಿಯೊಬ್ಬರಿಗೆ ಕಿಡ್ನಿ ಬೇಕಾಗಿದೆ. ಒಂದು ಕಿಡ್ನಿ ನೀಡಿದರೆ 6 ಕೋಟಿ ರೂ. ಸಿಗುತ್ತದೆ ಎಂದು ಆಮಿಷ ಒಡ್ಡುತ್ತಿದ್ದರು. ಕೆಲ ಅಮಾಯಕರು ಕಿಡ್ನಿ ನೀಡಲು ಸಿದ್ಧವಾಗುತ್ತಿದ್ದರು. 

ಈ ಹಂತದಲ್ಲಿ ಆರೋಪಿಗಳು ಅವರಿಂದ 2 ಲಕ್ಷ ರೂ. ವರೆಗೂ ಹಣವನ್ನು ನೋಂದಣಿ ಶುಲ್ಕದ ನೆಪದಲ್ಲಿ ಕಟ್ಟಿಸಿಕೊಳ್ಳುತ್ತಿದ್ದರು. 

ಈ ಸಂಗತಿ ಆಸ್ಪತ್ರೆಯವರ ಗಮನಕ್ಕೆ ಈ ಹಿಂದೆ ಬಂದಿದ್ದು, ಆಸ್ಪತ್ರೆಯವರು ತಮಗೂ ಕಿಡ್ನಿ ಮಾರಾಟ ದಂಧೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. 

ಆರೋಪಿಗಳು ಆಸ್ಪತ್ರೆಯ ವೈದ್ಯರ ಹೆಸರು ಹೇಳಿಕೊಂಡೇ ಕರೆ ಮಾಡುತ್ತಿದ್ದರು. ಅಲ್ಲದೆ ಅನುಮಾನ ಬಾರದಿರಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆ ವೈದ್ಯರ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನೇ ಸೃಷ್ಟಿಸಿದ್ದರು. ಇವೆಲ್ಲದರಿಂದಾಗಿ ಅಮಾಯಕರಿಗೆ ವಂಚಕರ ಮೇಲೆ ಅನುಮಾನವೇ ಬಂದಿರಲಿಲ್ಲ.  

ಆರೋಪಿಗಳಿಂದ ಮೋಸ ಹೋದ ಹಲವರು ಆಸ್ಪತ್ರೆಯವರಲ್ಲಿ ದೂರು ನೀಡಿದಾಗ ಪ್ರಕರಣದ ಗಂಭೀರತೆ ಅರಿವಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಆಡಳಿತ ಮಂಡಳಿ ಎಫ್ ಐ ಆರ್ ದಾಖಲಿಸಿತ್ತು. 

ಈ ಬಗ್ಗೆ ಆಸ್ಪತ್ರೆ ಸ್ಪಷ್ಟವಾಗಿ ತಮಗೂ ವಂಚಕರಿಗೂ ಸಂಬಂಧ ಇಲ್ಲ. ಮಾನವ ಅಂಗಾಂಗಗಳ ಮಾರಾಟ ಕಾನೂನು ಬಾಹಿರ ಕೃತ್ಯ ಎಂದು ತಮಗೆ ಕರೆ ಮಾಡಿದವರಿಗೆ ಸಮಜಾಯಿಷಿ ನೀಡಿದೆ.

SCROLL FOR NEXT