ರಾಜ್ಯ

ವಸತಿ ಯೋಜನೆಯಡಿ ರದ್ದಾಗಿರುವ 2711 ಮನೆಗಳ ಮಾಹಿತಿ ನೀಡುವಂತೆ ಸೂಚನೆ

Manjula VN

ಬೆಂಗಳೂರು: ವಿವಿಧ ವಸತಿ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಗೆ ನಿಗದಿಯಾಗಿದ್ದ 2711 ಮನೆಗಳನ್ನು ರದ್ದುಪಡಿಸಿರುವ ಕುರಿತು 15 ದಿನದೊಳಗೆ ಸಮಗ್ರ ವರದಿ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮಾಜಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಬೆಂಗಳೂರುನಗರ ಜಿಲ್ಲಾ ಪಂಚಾಯ್ತಿಯಲ್ಲಿಂದು ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, 2019ರ ಡಿಸೆಂಬರ್ 30ರಂದು ನಡೆದ ದಿಶಾ ಸಭೆಯ ಅನುಪಾಲನ ವರದಿ ಪ್ರಗತಿ ಪರಿಶೀಲಿಸಿ ಈ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ವಿವಿಧ ವಸತಿ ಯೋಜನೆಯಡಿ ನಗರ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ 4579 ಮನೆಗಳು ನಿಗದಿಯಾಗಿದ್ದು, ಈ ಪೈಕಿ 1739 ಮನೆಗಳನ್ನು ಆಯ್ಕೆ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮವು 2711 ಮನೆಗಳ ಗುರಿಯನ್ನು ರದ್ದುಪಡಿಸಿರುವ ಬಗ್ಗೆ ಸಮಂಜಸ ವರದಿ ಕೊಡಬೇಕು. ಯಾವ ಕಾರಣಕ್ಕಾಗಿ ಮನೆಗಳು ರದ್ದಾಗಿದೆ ಎಂಬುದರ ಬಗ್ಗೆ ವಿಸ್ತೃತ ವರದಿಯನ್ನು ನೀಡಬೇಕು. ಆಯ್ಕೆಯಾದ ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಿಲ್ಲವೇ, ಎಲ್ಲಿ ಲೋಪವಾಗಿದೆ. ನಿಗದಿಯಾದ ಗುರಿ ತಪ್ಪುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಏನಾದರೂ ವ್ಯತ್ಯಾಸವಾಗಿರುವುದು ಕಂಡುಬಂದರೆ ತನಿಖೆಗೆ ಒಳಪಡಿಸಲಾಗುವುದು. ಅಧಿಕಾರಿಗಳಿಂದ ಲೋಪವಾಗಿದ್ದರೆ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
 
ಪ್ರಧಾನಮಂತ್ರಿ ಅವಾಸ್ ಯೋಜನೆ ಗುರಿ ತಲುಪುವ ನಿಟ್ಟಿನಲ್ಲಿ ಅನುಷ್ಠಾನವಾಗಬೇಕು. ಪ್ರಧಾನಿಯವರು 2025ರೊಳಗೆ ಎಲ್ಲರಿಗೂ ಸೂರು ಅಥವಾ ಮನೆ ಕಲ್ಪಿಸಬೇಕೆಂಬ ಸಂಕಲ್ಪ ಮಾಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೋವಿಡ್ ಅವಧಿಯಲ್ಲಿ ಹಂಚಿಕೆಯಾದ ಮನೆಗಳಲ್ಲಿ ಶೇ.50ರಷ್ಟು ಪ್ರಗತಿ ಸಾಧಿಸಲಾಗಿದೆ ಎಂಬ ಅಧಿಕಾರಿಯೊಬ್ಬರ ಉತ್ತರಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡರು, ಮುಂದಿನ ದಿಶಾ ಸಭೆಯ ವೇಳೆಗೆ ಪೂರ್ಣ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.

ಮುಂದಿನ ಹತ್ತು ದಿನಗಳಲ್ಲಿ ವರ್ಷವಾರು ಮನೆಗಳ ಪ್ರಗತಿಯ ಮಾಹಿತಿಯನ್ನು ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಹಾಗೂ ತಮಗೆ ನೀಡಬೇಕು. ಇದರಿಂದ ಮನೆಗಳ ನಿರ್ಮಾಣ ತ್ವರಿತವಾಗಿ ಆಗಲು ಸಹಕಾರಿಯಾಗಲಿದೆ ಎಂದರು.

SCROLL FOR NEXT