ರಾಜ್ಯ

ಓಮಿಕ್ರಾನ್ ವೈರಸ್ ಆತಂಕ: ಸಭೆ-ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲು ಬಿಬಿಎಂಪಿ ಮುಂದು?

Sumana Upadhyaya

ಬೆಂಗಳೂರು: ಕೋವಿಡ್ ಎರಡನೇ ಅಲೆ ತಗ್ಗಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದುಕೊಂಡಿರುವಾಗಲೇ ಓಮಿಕ್ರಾನ್ ರೂಪಾಂತರಿ ಕೊರೋನಾ ಸೋಕು ತಾಂಡವವಾಡಲು ಆರಂಭವಾಗಿದೆ. ಬೆಂಗಳೂರಿನಲ್ಲಿ ದೇಶದಲ್ಲಿಯೇ ಮೊದಲ ಎರಡು ಓಮಿಕ್ರಾನ್ (Omicron) ಕೇಸುಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. 

ಈ ಸಂದರ್ಭದಲ್ಲಿ ಸೋಂಕು ತಡೆಗೆ ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತ (BBMP) ಅವರನ್ನು ಕೇಳಿದಾಗ, ಹೊರಾಂಗಣ ಮತ್ತು ಒಳಾಂಗಣ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಪ್ರಸ್ತುತ ಹೊರ ಪ್ರದೇಶಗಳಲ್ಲಿ ಮಾಡುವ ಕಾರ್ಯಕ್ರಮಗಳಲ್ಲಿ 500 ಮಂದಿ ಸೇರಲು ಮತ್ತು ಒಳಾಂಗಣ ಪ್ರದೇಶಗಳಲ್ಲಿ ಮಾಡುವ ಕಾರ್ಯಕ್ರಮಗಳಲ್ಲಿ 200 ಮಂದಿ ಸೇರಲು ಅವಕಾಶವಿದೆ. ಅದು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ಕೋವಿಡ್ (Covid) ನಿಯಂತ್ರಣ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ಮಾತುಕತೆ ನಡೆಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಪ್ರಸ್ತುತ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಎಷ್ಟು ಜನ ಸೇರಬೇಕೆಂಬ ಬಗ್ಗೆ ನಿಗದಿಪಡಿಸಿಲ್ಲ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಈ ತಿಂಗಳಾಂತ್ಯದಲ್ಲಿ ಇರುವ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವ ರೀತಿ ಅನುಮತಿ ನೀಡಬೇಕೆಂಬ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸುತ್ತೇನೆ. ಓಮಿಕ್ರಾನ್ ಸೋಂಕು ಮತ್ತು ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನತೆ ಆದಷ್ಟು ಮುಂಜಾಗ್ರತೆ ವಹಿಸುವುದು ಉತ್ತಮ, ಜನದಟ್ಟಣೆ ಸೇರುವುದನ್ನು ತಡೆಯಬೇಕು ಎಂದು ಆಯುಕ್ತರು ಮನವಿ ಮಾಡಿಕೊಂಡರು. 

ಕೋವಿಡ್-19 ಪಾಸಿಟಿವ್ ಬಂದವರಲ್ಲಿ ಶೇಕಡಾ 10 ರಿಂದ 15ರಷ್ಟು ಸ್ಯಾಂಪಲ್ ಗಳನ್ನು ಜೀನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗುತ್ತಿದೆ. ಅಂತರರಾಷ್ಟ್ರೀಯ ಪ್ರಯಾಣಿಕರು ಮತ್ತು ಓಮಿಕ್ರಾನ್ ಸೋಂಕಿನ ಗುಣಲಕ್ಷಣ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ಗೌರವ ಗುಪ್ತ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

SCROLL FOR NEXT