ರಾಜ್ಯ

ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆಯಲ್ಲಿ ಆಕ್ಷೇಪ: ಹೆಚ್ ಡಿ ರೇವಣ್ಣ ಪುತ್ರ ಡಾ ಸೂರಜ್ ಗೆ ಹೈಕೋರ್ಟ್ ನೊಟೀಸ್

Sumana Upadhyaya

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆಗೆ ಹಾಸನ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ(H D Revanna) ಅವರ ಪುತ್ರ ಡಾ ಸೂರಜ್(Dr Suraj) ಆರ್ ಅವರ ನಾಮಪತ್ರವನ್ನು ತಿರಸ್ಕರಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಡಾ ಸೂರಜ್ ಅವರು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ವೈವಾಹಿಕ ಸ್ಥಿತಿಗತಿ, ಈಗಿನ ಖಾತೆ ವಿವರಗಳನ್ನು ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಡಾ ಸೂರಜ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.

ಹಾಸನ(Hassan) ಜಿಲ್ಲೆಯ ಕುಂದೂರು ಗ್ರಾಮ ಪಂಚಾಯತ್  ಸದಸ್ಯ ಕೆ ಎಲ್ ಹರೀಶ್ ಎಂಬುವವರು ಹೈಕೋರ್ಟ್ ಗೆ ಆಕ್ಷೇಪ ಅರ್ಜಿ ಸಲ್ಲಿಸಿ ಸೂರಜ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಕೋರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೊಟೀಸ್ ಜಾರಿ ಮಾಡಿದ್ದಾರೆ. ಜನರ ಪ್ರತಿನಿಧಿ ಕಾಯ್ದೆ(Representation of People Act) ಅನ್ವಯ ಸೂರಜ್ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಜೊತೆ ಅಫಿಡವಿಟ್ಟಿನಲ್ಲಿ ಸೂರಜ್ ಅವರು ಕುಟುಂಬದ ಆದಾಯದ ವಿವರ-ಪತ್ನಿಯ ವಿವರ ಕಾಲಂನಲ್ಲಿ ಅನ್ವಯವಾಗುವುದಿಲ್ಲ ಎಂದು ನಮೂದಿಸಿದ್ದಾರೆ. ಆದರೆ ಸೂರಜ್ ಅವರು 2017ರಲ್ಲಿ ಸಾಗರಿಕ ಎಂಬುವವರನ್ನು ಮದುವೆಯಾಗಿದ್ದು ಉದ್ದೇಶಪೂರ್ವಕವಾಗಿ ಅಫಿಡವಿಟ್ಟಿನಲ್ಲಿ ವೈವಾಹಿಕ ಸ್ಥಿತಿಗತಿ ಮತ್ತು ಪತ್ನಿಯ ಆದಾಯ ವಿವರವನ್ನು ನೀಡಿಲ್ಲ ಎಂದು ಹರೀಶ್ ಹೇಳಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಚೆನ್ನಾಂಬಿಕ ಕನ್ವೆನ್ಷನ್ ಹಾಲ್ ನಲ್ಲಿ ಸೂರಜ್ ಸಹಭಾಗಿತ್ವ ಹೊಂದಿದ್ದಾರೆ. ಆದರೆ ಈಗಿನ ಖಾತೆ ವಿವರಗಳನ್ನು ಸೂರಜ್ ಉದ್ದೇಶಪೂರ್ವಕವಾಗಿ ನೀಡದೆ ಮುಚ್ಚಿಟ್ಟಿದ್ದಾರೆ ಎಂದು ಹರೀಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಅರ್ಜಿಗೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.

SCROLL FOR NEXT