ರಾಜ್ಯ

ರಾಜ್ಯದಲ್ಲಿ ಶೀಘ್ರದಲ್ಲೇ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಗಳ ಹೆಚ್ಚಳ: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಹುಬ್ಬಳ್ಳಿ: ರಾಜ್ಯದಲ್ಲಿ ಶೀಘ್ರದಲ್ಲೇ  ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ಗಳಿವೆ. ಆದರೆ, ಜಿನೋಮ್ ಪರಿಣಿತವಾಗಿರುವಂತಹ ವ್ಯವಸ್ಥೆ ಬೇಕು. ನಾವು ಎಲ್ಲವನ್ನೂ ಜಿನೋಮ್ ಟೆಸ್ಟ್ ಮಾಡುತ್ತಿಲ್ಲ. ಈಗ ಓಮಿಕ್ರಾನ್ ಬಂದಿದ್ದರಿಂದ ಎಲ್ಲೆಲ್ಲಿ ಸಂಶಯ ಬಂದಿದೆಯೋ ಅಲ್ಲಲ್ಲಿ ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ದೃಢಪಡಿಸಿಕೊಳ್ಳಲು ಎನ್ ಸಿಬಿಎಸ್ ಗೂ ಕಳುಹಿಸುತ್ತಿದ್ದೇವೆ. ಅತಿ ಶೀಘ್ರದಲ್ಲೇ ಟೆಸ್ಟ್ ರಿಪೋರ್ಟ್ ಬರುತ್ತಿವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಹೇಳಿದರು. 

ಜಿನೋಮ್ ಸೀಕ್ವೆನ್ಸ್ ಪರೀಕ್ಷಾ ಕೇಂದ್ರಗಳ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅದಕ್ಕೆ ಬೇಕಾಗಿರುವಂತಹ ಪರಿಣಿತರ ವ್ಯವಸ್ಥೆಯಾಗಬೇಕು. ಅದಕ್ಕೆ ಬೇಕಾಗಿರುವ ಉಪಕರಣಗಳ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು. 

ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಒಳ್ಳೆಯ ನಿರೀಕ್ಷೆಗಳಿದ್ದವು. ಆದರೆ, ಅವರು ಇತ್ತೀಚಿಗೆ ತುಂಬಾನೇ ಸುಳ್ಳು ಹೇಳುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ಬಗ್ಗೆ ತುಂಬಾನೇ ಗೌರವ ಇತ್ತು. ಆದರೆ, ಅವರ ಇತ್ತೀಚಿನ ಮಾತುಗಳು ತುಂಬಾನೇ ನಿರಾಶೆ ತರಿಸಿವೆ ಎಂದು ಹೇಳಿದರು. 

SCROLL FOR NEXT