ರಾಜ್ಯ

ಅಧಿಕಾರಿಗಳೊಂದಿಗಿನ ಅನೌಪಚಾರಿಕ ಸಭೆಯಲ್ಲಿ ಅಮೂಲ್ಯ ಸಲಹೆಗಳ ಪ್ರಸ್ತಾಪ; ನಾಳೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಆತಂಕ, ಕೋವಿಡ್ ಕ್ಲಸ್ಟರ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇಂದು ಬುಧವಾರ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳ ಜೊತೆ ಅನೌಪಚಾರಿಕ ಸಭೆ ನಡೆಸಿದರು.

ಈ ಸಭೆಯಲ್ಲಿ ಓಮಿಕ್ರಾನ್ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ನಿಯಮಗಳನ್ನು ಜಾರಿಗೆ ತರಬೇಕು, ಯಾವ ರೀತಿ ಕೊರೋನಾ ಮಾರ್ಗಸೂಚಿಗಳನ್ನು ತರಬೇಕು ಎಂದು ಅಧಿಕಾರಿಗಳ ಜೊತೆ ಅನೌಪಚಾರಿಕವಾಗಿ ಚರ್ಚೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸಲಹೆ-ಸೂಚನೆ, ಅಭಿಪ್ರಾಯಗಳನ್ನು ನೀಡಿದ್ದಾರೆ.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅನೌಪಚಾರಿಕ ಸಭೆ ನಡೆಸುತ್ತಿರುವ ಸಿಎಂ, ಓಮಿಕ್ರಾನ್  ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ನಾಳೆ ಮುಖ್ಯಮಂತ್ರಿಗಳು ಸುದೀರ್ಘವಾಗಿ ತಮ್ಮ ಸಂಪುಟದ ಸಹೋದ್ಯೋಗಿಗಳ ಜೊತೆ ಸಭೆ ನಡೆಸಲಿದ್ದು ಅಲ್ಲಿ ಇಂದಿನ ಮಾತುಕತೆ, ಚರ್ಚೆ-ಸಲಹೆಗಳನ್ನು ಸಚಿವರ ಮುಂದಿಟ್ಟು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ಇಂದಿನ ಸಭೆಯ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳ ಮುಂದಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ, ನಮ್ಮ ದೇಶದಲ್ಲಿ ಓಮಿಕ್ರಾನ್ ವರದಿ, ಬೇರೆ ಬೇರೆ ದೇಶಗಳಲ್ಲಿ ಓಮಿಕ್ರಾನ್ ಹೇಗಿದೆ, ಎಷ್ಟರ ಮಟ್ಟಿಗಿದೆ, ಅಲ್ಲಿನ ವರದಿ ಏನು ಹೇಳುತ್ತದೆ, ಸಿದ್ಧತೆ ಯಾವ ರೀತಿ ಮಾಡಿಕೊಳ್ಳಬೇಕೆಂದು ನಾಳೆ ಸಚಿವ ಸಂಪುಟದಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಳೆದ ಬಾರಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಏನೆಲ್ಲಾ ಕ್ರಮ ಕೈಗೊಂಡಿದ್ದೆವು, ಆಕ್ಸಿಜನ್ ಘಟಕ ಎಷ್ಟು ಬಂದಿದ್ದವು, ಎಷ್ಟು ಹಾಕಬೇಕಾಯಿತು, ಬಾಕಿ ಉಳಿಕೆಗೆ ಸರ್ಕಾರ ಎಷ್ಟು ಹಣ ನೀಡಬೇಕು, ಬಿಬಿಎಂಪಿ, ಕಂದಾಯ ಇಲಾಖೆ ತೆಗೆದುಕೊಂಡಿದ್ದ ಕ್ರಮಗಳು, ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆಗೆ ಎಷ್ಟು ಹಣ ನೀಡಬೇಕೆಂದು, ಲ್ಯಾಬ್ ಗೆ ಹಣ ನೀಡುವ ಬಗ್ಗೆ ಚರ್ಚೆ ಮಾಡಲಾಯಿತು. ಹಣಕಾಸು ಬಿಡುಗಡೆಗೆ ಮತ್ತು ಹಣಕಾಸು ವ್ಯವಸ್ಥೆಗೆ ಸಹ ಸೂಚನೆ ನೀಡಿದ್ದೇನೆ ಎಂದರು. 

ಕೋವಿಡ್ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು ನಾಳೆ ಸಚಿವ ಸಂಪುಟದಲ್ಲಿ ವಿಶೇಷ ತಜ್ಞರಾದ ಡಾ ಸುದರ್ಶನ್ ಅವರನ್ನು ಕರೆಸಿ ಅಲ್ಲಿ ವಿವರಗಳನ್ನು ಪಡೆದುಕೊಂಡು ಮಾರ್ಗಸೂಚಿ ಹೊರಡಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. 

SCROLL FOR NEXT