ರಾಜ್ಯ

ಪಂಚಮ ಸಾಲಿ ಸಮುದಾಯ ಮೀಸಲಾತಿಗೆ ಸೂಕ್ತ ನಿರ್ಣಯ; ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಬೊಮ್ಮಾಯಿ

Nagaraja AB

ಬೆಂಗಳೂರು: ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಮುಂದಿನ ತಿಂಗಳು ನಡೆಯಲಿರುವ ಹರಜಾತ್ರೆ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಿಳಿಸಿದರು.

ಹರಿಹರದ ಪಂಚಮಸಾಲಿ ಗುರುಪೀಠ ಆಶ್ರಯದಲ್ಲಿ ಜನವರಿ 14,15 ರಂದು  ನಡೆಯಲಿರುವ ಹರಜಾತ್ರೆಯ ಲೋಗೋ, ಧ್ವನಿಸುರುಳಿ, ಟಿ ಶರ್ಟ್​ನನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹರ ಎಂದರೆ ಆಧ್ಯಾತ್ಮಕವಾಗಿ ಶಕ್ತಿ, ಲೌಕಿಕವಾಗಿ ‘ಬಗೆಹರಿಸುವುದು’ಎಂದರ್ಥ. ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತಹ ಶ್ರೇಷ್ಠ ದೇವರು ಹರ. ಹರನನ್ನು ನಂಬುವವರು ತಮ್ಮ ಬದುಕಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದರು.

ಪಂಚಮಸಾಲಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಒಕ್ಕಲುತನವನ್ನು ನಂಬಿದವರು 21ನೇ ಶತಮಾನದಲ್ಲಿ ಬದಲಾವಣೆ ಆಗಬೇಕು. ಅತಿ ಹೆಚ್ಚು ವಿದ್ಯಾವಂತರಿರುವ, ಎಲ್ಲ ರಂಗದಲ್ಲಿಯೂ ಪರಿಣಿತರಿರುವ ಸಮಾಜವಾಗಿ ಹೊರಹೊಮ್ಮಬೇಕಾಗಿರುವ ಆಧುನಿಕ ಸಮಯದ ಬೇಡಿಕೆಯಾಗಿದೆ. ಈ ದಿಸೆಯಲ್ಲಿ ಶ್ರೀಗಳು ಹೊಸ ದಿಕ್ಕನ್ನು ತೋರಿಸಿದ್ದಾರೆ. ಪೀಠಕ್ಕೆ ಬಂದ ಕೆಲವೇ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಪಾದಯಾತ್ರೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು , ಕರ್ತವ್ಯನಿಷ್ಠೆಯನ್ನು ಇಡೀ ಸಮಾಜಕ್ಕೆ ತೋರಿಸಿದ್ದಾರೆ. ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ, ಇಡೀ ಸಮಾಜ, ಸಮುದಾಯ, ನಾಡಿನ ಜನ ಉತ್ತಮ ರೀತಿಯಲ್ಲಿ ಬದುಕು ನಡೆಸುವ ಕಲ್ಪನೆಯೊಂದಿಗೆ ಶ್ರೀಗಳು ದುಡಿಯುತ್ತಿದ್ದಾರೆ. ಪರಮಪೂಜ್ಯರ ನೇತೃತ್ವದಲ್ಲಿ ಹರಜಾತ್ರೆ ದೊಡ್ಡಮಟ್ಟದಲ್ಲಿ ನಡೆಯುತ್ತಾ ಬಂದಿದೆ ಎಂದರು.

ಹರಜಾತ್ರೆಯ ಮೂಲಕ ನಾಡು, ಸಂಸ್ಕೃತಿಯನ್ನು ಬೆಳೆಸುವ ಗುರಿ ಪೂಜ್ಯರು ಹೊಂದಿದ್ದಾರೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹರಜಾತ್ರೆಯಲ್ಲಿ ಯುವಜನರಿಗೆ ಎನ್‍ಇಪಿ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಮತ್ತು ಕೌಶಲ್ಯ ಸಿಕ್ಕ ನಂತರ ಉದ್ಯೋಗ ಮತ್ತು ಉದ್ಯಮ ಸೃಜನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಮಾಜವನ್ನು ಕಟ್ಟುವ ಜೊತೆಗೆ ಸಮಾಜಕ್ಕೆ ನ್ಯಾಯವನ್ನು ಒದಗಿಸುವ ವಿಚಾರದಲ್ಲಿ ಬಹಳ ಸ್ಪಷ್ಠತೆಯಿಂದ ಮುನ್ನೆಡಿದ್ದಾರೆ. ಸಮಾಜವನ್ನು 2 ಎ ಮೀಸಲಾತಿ ನೀಡುವ ಬಗ್ಗೆ ಸೂಕ್ತ ಸಲಹೆ ಸಹಕಾರಗಳನ್ನು ನೀಡಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

SCROLL FOR NEXT