ರಾಜ್ಯ

ಡಿ.13ರಂದು ಬೆಳಗಾವಿಯಲ್ಲಿ ಸಚಿವ ಸಂಪುಟ ಸಭೆ: ಸಿಎಂ ಬೊಮ್ಮಾಯಿ

Manjula VN

ಬೆಳಗಾವಿ: 10 ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಳೆದ ಬಾರಿ ನಡೆಸಲಾದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಆ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಆದರೆ, ಅಧಿವೇಶನದಲ್ಲಿ ಯಾವೆಲ್ಲಾ ಮಸೂದೆಗಳನ್ನು ಮಂಡಿಸಲಾಗುತ್ತದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ.

ಮೂಲಗಳ ಪ್ರಕಾರ ಮತಾಂತರ ನಿಷೇಧ ಕಾಯ್ದೆ ಮತ್ತು ಎಪಿಎಂಸಿ ವಿಧೇಯಕಗಳು ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗಬೇಕಿರುವ ಪಟ್ಟಿಯಲ್ಲಿ ಇಲ್ಲದಿದ್ದರೂ, ಮಂಡನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಪರಿಷತ್ ಚುನಾವಣೆಯ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ನನಗೆ ತಿಳಿದುಬಂದಿರುವ ಮಾಹಿತಿಗಳ ಪ್ರಕಾರ ಪ್ರಸ್ತುತದ ವಾತಾವರಣ ಬಿಜೆಪಿ ಪರವಾಗಿದೆ. ಪ್ರತಿ ಚುನಾವಣೆಯೂ ಅದರದೇ ಆದ ನೆಲೆಗಟ್ಟಿನ ಮೇಲೆ ನಡೆಯುತ್ತವೆ. ತಮ್ಮದೇ ಆದ ಮತದಾರರನ್ನು ಹೊಂದಿರುತ್ತವೆ. ಮುಂಬರುವ ವಿಧಾನಸಭಾ ಚುನಾವಣೆಯು ಆಗಿನ ಸಂದರ್ಭ ಹಾಗೂ ಆಗೇನು ರಾಜಕೀಯ ಸನ್ನಿವೇಶ ಇರುತ್ತದೆಯೋ ಆ ನೆಲೆಗಟ್ಟಿನ ಮೇಲೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕದ ಹಲವು ಸಂಘಟನೆಗಳು, ನಾಯಕರು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ಈ ನಡುವೆ ಬೆಂಗಳೂರಿನಿಂದ ಬೆಳಗಾವಿ ಸುವರ್ಣಸೌಧಕ್ಕೆ ಕೆಲ ಕಚೇರಿಗಳನ್ನು ಸ್ಥಳಾಂತರ ಮಾಡುವಂತೆಯೂ ಆಗ್ರಹಗಳು ಕೇಳಿ ಬರುತ್ತಿದ್ದು, ಅಧಿವೇಶನದ ವೇಳೆ ಕೆಲ ಸಂಘಟನೆಗಳು, ಉತ್ತರ ಕರ್ನಾಟಕದ ರೈತರು ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

SCROLL FOR NEXT