ರಾಜ್ಯ

ದಾವಣಗೆರೆ: ಹಿಂದಿ ಶಿಕ್ಷಕರ ಮೇಲೆ ಹಲ್ಲೆ: ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು

Nagaraja AB

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಹಿಂದಿ ಶಿಕ್ಷಕರೊಬ್ಬರ ಮೇಲೆ ದಾಳಿ ನಡೆಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ವಿರುದ್ಧ ಜಿಲ್ಲಾ ಪೊಲೀಸರು  ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. 

ಪುಂಡತನ ನಡೆಸಿದ್ದ ವಿದ್ಯಾರ್ಥಿಗಳು ಕೊನೆಗೆ  ಶಿಕ್ಷಕ ಪ್ರಕಾಶ್ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಯಿತು. ಆದರೆ, ಕೊನೆಗೂ ಜಿಲ್ಲಾ ಪೊಲೀಸರು ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

ಮಕ್ಕಳಿಗೆ ತಕ್ಕ ಪಾಠ ಕಲಿಸಬೇಕು, ಅವರು ಮಾಡಿರುವ ತೊಂದರೆಯನ್ನು ಅರ್ಥ ಮಾಡಿಕೊಳ್ಳಬೇಕು, ಆದರೆ ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. 

ನಲ್ಲೂರಿನ ಸರ್ಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ತಮ್ಮ ಹಿಂದಿ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಶುಕ್ರವಾರ ವೈರಲ್ ಆಗಿತ್ತು. ಕಳೆದ ಸೋಮವಾರ ನಡೆದಿದ್ದ ಈ ಘಟನೆ ವಿಡಿಯೋ ಗುರುವಾರದಿಂದ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿ, ಐವರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. 

ಶಾಲೆಯ ಅಧಿಕಾರಿಗಳ ಪ್ರಕಾರ, ಇತ್ತೀಚೆಗೆ ಹಾವೇರಿ ಜಿಲ್ಲೆಯಿಂದ ಸ್ಥಳಾಂತರಗೊಂಡ ಶಿಕ್ಷಕ ಪ್ರಕಾಶ್ ಅವರು ತರಗತಿಗೆ ಬಂದಾಗ ವಿದ್ಯಾರ್ಥಿಯೊಬ್ಬ  ಡಸ್ಟ್‌ಬಿನ್‌ನಿಂದ ಹೊಡೆಯಲು ಪ್ರಯತ್ನಿಸಿದ್ದ. ನಂತರ ಅವರ ತಲೆಯ ಮೇಲೆ ಡಬ್ಬವನ್ನು ಹಾಕಿದ್ದ. ತರಗತಿಯಲ್ಲಿ ಗುಟ್ಕಾ ಸೇವಿಸಿ ಕಸ ಎಸೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಕಾಶ್ ಛೀಮಾರಿ ಹಾಕಿದ್ದಲ್ಲದೆ, ತಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಮುಂದಾದಾಗ ಶಿಸ್ತು ಕಾಪಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. 

SCROLL FOR NEXT