ರಾಜ್ಯ

ಬೆಳಗಾವಿ ಅಧಿವೇಶನ: ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಯ ಸುಳಿವು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Sumana Upadhyaya

ಬೆಳಗಾವಿ: ಕಾನೂನು ಇಲಾಖೆಯ ಕಾಯಿದೆಗಳ ಪರಿಶೀಲನಾ ಸಮಿತಿ ಮುಂದೆ ಯಾವ್ಯಾವ ಕಾಯ್ದೆಗಳು ಬರುತ್ತವೆ ಎಂದು ನೋಡಿಕೊಂಡು ಸದನದಲ್ಲಿ ಮಂಡಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. 

ಇಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯನ್ನು ಸಂಪುಟದಲ್ಲಿ ತಂದು ನಂತರ ಸದನದಲ್ಲಿ ಮಂಡಿಸುತ್ತೇವೆ ಎಂದಿದ್ದಾರೆ.

ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ: ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ದವಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಹಲವು ಯೋಜನೆಗಳನ್ನು ತರಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸದನದಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಬೆಳಗಾವಿಯ ಈ ಬಾರಿ ಅಧಿವೇಶನದಲ್ಲಿ ಸರ್ಕಾರದ ಮೇಲೆ ಜನತೆ ನಿರೀಕ್ಷೆ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಸಿಎಂ ಹೇಳಿದರು.

ಸುವರ್ಣ ಸೌಧದ ಹೊರಗೆ ರೈತರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ, ರೈತರ ಜೊತೆ ಚರ್ಚಿಸುತ್ತೇನೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಸುದ್ದಿಗಾರರು ಕೇಳಿದಾಗ, ನೋಡೋಣ, ರೈತರು ಏನು ಹೇಳುತ್ತಾರೆ ಎಂದು ಕೇಳಿ ತೀರ್ಮಾನಿಸುತ್ತೇವೆ ಎಂದರು.

SCROLL FOR NEXT