ರಾಜ್ಯ

ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ, ಅಪ್ಪುಗೆ ಪದ್ಮಶ್ರೀಗೆ ಶಿಫಾರಸು

Lingaraj Badiger

ಬೆಳಗಾವಿ: ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಮೊದಲನೆಯದಾಗಿ ಸದನದ ಸಂಪ್ರದಾಯದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕೈಗೆತ್ತಿಕೊಂಡರು.

ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಸದನದಲ್ಲಿ ಗಣ್ಯರು ಸಂತಾಪ ಸೂಚಿಸಿ ಮೌನಾಚರಿಸಿದರು. ಪುನೀತ್ ರಾಜ್‍ಕುಮಾರ್ ಸಂತಾಪದ ಮೇಲೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರರಂಗ ಸೇರಿದಂತೆ ಸಹಸ್ರಾರು ಅಭಿಮಾನಿಗಳನ್ನು ಅಗಲಿರುವ ಸ್ಯಾಂಡಲ್‍ವುಡ್‍ನ “ಅಪ್ಪು”ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಬೊಮ್ಮಾಯಿ ಕೆಳಮನೆಯ ಸದನಕ್ಕೆ ಭರವಸೆ ನೀಡಿದರು.

ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ. ವಿರೋಧ ಪಕ್ಷದವರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅನಿಸುತ್ತಿದೆ. ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆಯೇ ಆಗಿದೆ. ಪುನೀತ್ ಮರಣ ಅಘಾತವಾಗಿದೆ. ಯಾರೂ ಹೀಗೆ ಸಾವನ್ನು ನಿರೀಕ್ಷೆ ಮಾಡಿರಲಿಲ್ಲ. ಕಾನೂನು ಸುವ್ಯವಸ್ಥೆ ದೊಡ್ಡ ಸವಾಲಾಗಿತ್ತು. ರಾಜಕುಮಾರ್ ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆಯಿಂದ ಜನರ ಸಹಕಾರ, ಪೊಲೀಸರ ಸಹಕಾರದಿಂದ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು ಎಂದರು.

ಈಗಾಗಲೇ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನು ಶೀಘ್ರ ಪ್ರಕಟ ಮಾಡುವುದಾಗಿ ಹೇಳಿದರು.

ವಿಧಾನಸಭೆಯ ಮೊದಲ ದಿನದ ಕಲಾಪದಲ್ಲಿ ಆರಂಭದಲ್ಲಿ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಾಜಿ ರಾಜ್ಯಪಾಲರಾಗಿದ್ದ ಕೋಣಿಜೇತಿ ರೋಸಯ್ಯ, ಮಾಜಿ ಸಂಸದ ವಿರುಪಾಕ್ಷಪ್ಪ ಸಂಗಣ್ಣ ಅಗಡಿ, ಮಾಜಿ ಸಚಿವ ಎಸ್.ಆರ್.ಮೋರೆ, ಕನ್ನಡ ಚಲನಚಿತ್ರ ರಂಗದ ಯುವ ನಟ ಪುನೀತ್ ರಾಜ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಪಿ.ಭೋಜರಾಜ ಹೆಗ್ಡೆ, ಹಿರಿಯ ವಿದ್ವಾಂಸ ಕೆ.ಎಸ್.ನಾರಾಯಣಾಚಾರ್ಯ, ಹಿರಿಯ ಬಯಲಾಟ ಕಲಾವಿದೆ ನಾಡೋಜ ಹರಿಜನ ಪದ್ಮಮ್ಮ, ಕನ್ನಡ ಚಿತ್ರರಂಗದ ಹಿರಿಯ ನಟರಾದ ಶಿವರಾಂ ಹಾಗೂ ಭಾರತ ಸೇನಾಪಡೆಯ ಸಶಸ್ತ್ರ ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರುಗಳಿಗೆ ಸಂತಾಪ ಸೂಚಿಸಲಾಯಿತು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಸಚಿವ ಈಶ್ವರಪ್ಪ ಹಾಗೂ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಸದನದಲ್ಲಿ ಮೃತರ ಕೊಡುಗೆಗಳನ್ನು ಸ್ಮರಿಸಿದರು.

ಮೃತರ ಗೌರವಾರ್ಥ ಮಾನ್ಯ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷ ಮೌನವನ್ನು ಆಚರಿಸಿದರು. ಅಲ್ಲದೆ, ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆ ನಿರ್ಣಯವನ್ನು ಮೃತ ಗಣ್ಯರ ಕುಟುಂಬದವರಿಗೆ ಕಳುಹಿಸಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಬಳಿಕ, ಮಧ್ಯಾಹ್ನ 3 ಗಂಟೆಗೆ ವಿಧಾನಸಭೆ ಕಲಾಪವನ್ನು ಮುಂದೂಡಲಾಯಿತು.

SCROLL FOR NEXT