ರಾಜ್ಯ

ನಕಲಿ ಆಧಾರ್ ಕಾರ್ಡ್ ನೊಂದಿಗೆ 224 ಮಕ್ಕಳು ಬೆಂಗಳೂರಿಗೆ ಕಳ್ಳ ಸಾಗಣೆ

Nagaraja AB

ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಗಳೊಂದಿಗೆ ಕೆಲಸಕ್ಕಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮಾನವ ಕಳ್ಳ ಸಾಗಣೆದಾರರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಈ ವರ್ಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ವೊಂದರಲ್ಲಿಯೇ ಇಂತಹ 224 ಪ್ರಕರಣಗಳನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಆಧಾರ್ ಕಾರ್ಡ್ ಲ್ಯಾಮಿನೇಷನ್ನು ಕೈಯಿಂದ ಮಾಡಿರುವುದು ಸಾಬೀತಾಗಿದೆ ಎಂದು ರೈಲ್ವೆ ಪೊಲೀಸ್ ಎಸ್ ಪಿ ಸಿರಿ ಗೌರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಒರಿಜಿನಲ್ ಆಧಾರ್ ಕಾರ್ಡ್ ನಲ್ಲಿದ್ದ ವಯಸ್ಸಿನ ವಿವರಗಳನ್ನು ತಿರುಚಲಾಗಿದೆ. ಮಕ್ಕಳೊಂದಿಗೆ ಮಾತನಾಡಿದಾಗ ವಯಸ್ಸು ಬೇರೆ ಬೇರೆ ಆಗಿರುವುದು ಬಹಿರಂಗವಾಗಿದೆ. ಹೆಸರನ್ನೂ ಬದಲಾವಣೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ, ನೆರೆಯ ರಾಷ್ಟ್ರಗಳಿಂದ ವಲಸಿಗರನ್ನು ಕರೆತರಲು ಈ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಆಧಾರ್ ಕಾರ್ಡ್ ಗಳು ನಕಲಿಯಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಜನ್ಮ ದಿನ ಹಾಗೂ ತಿಂಗಳು ಎರಡರಲ್ಲೂ  ‘1’ ಎಂದು ನೀಡಲಾಗಿದೆ.  ಅವರಲ್ಲಿ ಅನೇಕ ಮಂದಿ ಹೇಗೆ ಒಂದೇ ದಿನ ಜನಿಸಿರಲು ಸಾಧ್ಯ ಎಂದು ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ ಬೆಂಗಳೂರು ಘಟಕದ ಕಾರ್ಯಕ್ರಮ ಮ್ಯಾನೇಜರ್ ಎಂ.ಪಿ. ರಶ್ಮಿ ಪ್ರಶ್ನಿಸಿದ್ದಾರೆ. 

ಇಂತಹ ಮಕ್ಕಳಲ್ಲಿ ಶೇ. 70 ರಷ್ಟು ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಕ್ಕೆ ಸೇರಿದವರಾಗಿದ್ದು, ಕೆಲವರು ರಾಜಸ್ಥಾನ, ಓಡಿಶಾ, ಜಾರ್ಖಂಡ್ ಮತ್ತು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಈ ಕಾರ್ಡ್ ನಲ್ಲಿ 14 ರಿಂದ 15 ವಯಸ್ಸಿನ ಮಕ್ಕಳ ವಯಸ್ಸನ್ನು 20 ಎಂದು ತೋರಿಸಲಾಗಿದೆ. ಯುಐಡಿಎಐ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಸುಲಭವಾಗಿ ಪ್ರಕರಣ ಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದು ಎಸ್ ಪಿ ಹೇಳಿದರು. 

SCROLL FOR NEXT