ರಾಜ್ಯ

ನ್ಯಾಯಾಲಯದ ಆದೇಶಗಳಿಗೆ ಸರ್ಕಾರ ನಿರಾಸಕ್ತಿ: ಹೈಕೋರ್ಟ್ ತೀವ್ರ ಕಿಡಿ

Manjula VN

ಬೆಂಗಳೂರು: ನ್ಯಾಯಾಲಯದ ಆದೇಶಗಳನ್ನು ಸರ್ಕಾರದ ಅಧಿಕಾರಿಗಳು ಲಘುವಾಗಿ ಪರಿಗಣಿಸುತ್ತಿದ್ದು, ಸರ್ಕಾರದಿಂದ ಸೂಕ್ತ ಸಹಕಾರ, ನೆರವಿಲ್ಲದೆ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಕರಣಗಳು ಅನಗತ್ಯವಾಗಿ ಬಾಕಿ ಉಳಿಯುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಬುಧವಾರ ತೀವ್ರವಾಗಿ ಕಿಡಿಕಾರಿದೆ.

ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ಜನತಾ ಬಜಾರ್‌ ಕಟ್ಟಡ ತೆರವುಗೊಳಿಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಇಂಡಿಯನ್‌ ನ್ಯಾಷನಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ ಹೆರಿಟೇಜ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನಿನ್ನೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಈ ವೇಳೆ ಸರ್ಕಾರಿ ಪರ ವಕೀಲರು, ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಸಮಯ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಕಾಲಾವಕಾಶ ನೀಡಿದರೆ ಮಾಹಿತಿ ಪಡೆದು ವಿವರ ಸಲ್ಲಿಸುವುದಾಗಿ ಹೇಳಿದರು

ಈ ವೇಳೆ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, 2020ರ ಜನವರಿಯಲ್ಲಿಯೇ ಆಕ್ಷೇಪಣೆ ಸಲ್ಲಿಕೆಗೆ ಮೂರು ವಾರ ಕಾಲಾವಕಾಶ ನೀಡಲಾಗಿತ್ತು. ಆನಂತರ ಹಲವು ಬಾರಿ ಸಮಯ ಪಡೆದುಕೊಳ್ಳಲಾಗಿದೆ. ಆದರೂ ಸಹ ಆಕ್ಷೇಪಣೆ ಸಲ್ಲಿಸಿಲ್ಲ. ಆ ಬಗ್ಗೆ ಮಾಹಿತಿಯೂ ನೀಡುತ್ತಿಲ್ಲ. ಇದು ಸ್ಸಾರಿ ಸ್ಟೇಟ್‌ ಆಫ್‌ ಅಫೇರ್ಸ್ ಎಂದು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿತು.

ಅಲ್ಲದೆ, ಕೋರ್ಟ್‌ ಆದೇಶಗಳ ಪಾಲನೆಯಲ್ಲಿ ಸರ್ಕಾರ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ. ಇಂತಹ ಧೋರಣೆಯನ್ನು ಸಹಿಸಲಾಗದು. ಹಾಗಾಗಿ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಕಠಿಣ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಹೇಳಿ, ಆದೇಶದ ಪ್ರತಿಯನ್ನು ಸಿಎಸ್‌ಗೆ ಕಳುಹಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

SCROLL FOR NEXT