ರಾಜ್ಯ

ಬೆಳಗಾವಿ ಅಧಿವೇಶನ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ; ಘಟನೆ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ

Vishwanath S

ಬೆಳಗಾವಿ(ಸುವರ್ಣ ವಿಧಾನಸೌಧ): ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಿಧಾನಸಭೆಯಲ್ಲಿ ಖಂಡನಾ ನಿರ್ಣಯದ ನಿರ್ಧಾರ ಕೈಗೊಳ್ಳಲಾಯಿತು.

ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸಭೆ ಸೇರಿದಾಗ ಎಂಇಎಸ್ ನಾಯಕರಿಗೆ ಬೆಳಗಾವಿಯಲ್ಲಿ ಕಪ್ಪು ಮಸಿ ಬಳಿದರು ಎಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಮತ್ತೆ ವಿಷಯ ಪ್ರಸ್ತಾಪಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ಮುಖಂಡರಿಗೆ ಮಸಿ ಬಳಿದ ಕನ್ನಡಾಭಿಮಾನಿಗೆ ಶಿಕ್ಷೆ ವಿಧಿಸಿ ಜೈಲಿಗೆ ಅಟ್ಟಲಾಗಿದೆ. ಆದರೆ, ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟವರನ್ನು ಮಹಾರಾಷ್ಟ್ರ ಸರ್ಕಾರ ಶಿಕ್ಷೆ ನೀಡಿದ್ಯಾ ಎಂದು ಪ್ರಶ್ನೆ ಮಾಡಿದರು. ಮಹಾರಾಷ್ಟ್ರ ಪುಂಡರು ಧ್ವಜ ಸುಟ್ಟು 2 ದಿನಗಳಾದ್ರೂ  ಕ್ರಮ ಕೈಗೊಂಡಿಲ್ಲ. ಭಾಷೆಯ ಬಗ್ಗೆ ನಮಗೆ ಎಷ್ಟು ಕಾಳಜಿ ಇದೆ ನೋಡಿ ಎಂದ ಅವರು, ಕರ್ನಾಟಕಕ್ಕೆ ಅಪಮಾನವಾಗಿದೆ. ಕನ್ನಡಿಗರು ಶಕ್ತಿಹೀನರಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಅನ್ನದಾನಿ ಪ್ರಮುಖ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರ ಪುಂಡರು ಮತಿಹೀನರಾಗಿದ್ದಾರೆ. ಭಾಷಾವಾರು ಪ್ರಾಂತ್ಯ ಮಾಡಿಕೊಂಡು ನಾವೆಲ್ಲ ಭಾರತೀಯರಾಗಿದ್ದೇವೆ. 1956ರಿಂದ ಕನ್ನಡ ಬಾವುಟದೊಂದಿಗೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಮಹಾರಾಷ್ಟ್ರ ಪುಂಡರು ಕನ್ನಡ ಧ್ವಜವನ್ನು ಸುಟ್ಟಿರುವುದು ಅಕ್ಷರಶಃ ಖಂಡನೀಯವಾಗಿದೆ. ಘಟನೆಯನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಬೇಕು. ಹಾಗೂ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಕ್ಕೆ ಖಂಡನಾ ನಿರ್ಣಯವನ್ನು ಕಳಿಸೋಣ ಎಂದು ತಿಳಿಸಿದರು.

ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿದ್ದು ನಮಗೆ ನೋವು ತಂದಿದೆ. ನೆಲ,ಜಲ, ಭಾಷೆ ವಿಚಾರದಲ್ಲಿ ಯಾವುದೇ ಸರ್ಕಾರ ಇದ್ದರೂ ಎದ್ದು ನಿಲ್ಲುತ್ತದೆ. ಶಿವಸೇನೆ, ಎಂಇಎಸ್ ಪದೇ ಪದೇ ಈ ವಿಚಾರ ಇಟ್ಟುಕೊಂಡು ಗಡಿಭಾಗದಲ್ಲಿ ಪುಂಡಾಟ ನಡೆಸುತ್ತಿದೆ. ನಮ್ಮಲ್ಲಿ ಆಗಿದ್ದರೆ ಈ ಘಟನೆಯ ಬಗ್ಗೆ ಆರೋಪಿಗಳಿಗ ತಕ್ಷಣ ಶಿಕ್ಷೆ ವಿಧಿಸುತ್ತಿದ್ದೆವು. ಮಹಾರಾಷ್ಟ್ರದಲ್ಲಾಗಿರುವುದರಿಂದ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು, ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ. ಮುಂದೆ ಈ ರೀತಿ ನಡೆಯದಂತೆ ಹಾಗೂ ಘಟನೆಗೆ ಕಾರಣದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಲಾಗುವುದು ಅಶೋಕ್ ತಿಳಿಸಿದರು.

SCROLL FOR NEXT