ರಾಜ್ಯ

ಮತಾಂತರ ನಿಷೇಧ ಮಸೂದೆ ಮೇಲ್ಮನೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ

Lingaraj Badiger

ಬೆಂಗಳೂರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ 2021 ಅಥವಾ ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾದ ಮತಾಂತರ ನಿಷೇಧ ಮಸೂದೆ ವಿಧಾನ ಪರಿಷತ್ತಿನಲ್ಲಿ ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ವಿವಾದಾತ್ಮಕ ಮತಾಂತರ ನಿಷೇಧ ಮಸೂದೆ ಮೇಲ್ಮನೆಯಲ್ಲಿ ಮಂಡನೆಯಾಗುವ ಮುನ್ನ ವಿಧಾನಸಭೆಯಲ್ಲಿ ಬಿಸಿ ಚರ್ಚೆಯಾಗುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿಗೆ ವಿಧಾನ ಪರಿಷತ್ ನಲ್ಲಿ ಸಂಖ್ಯಾಬಲದ ಕೊರತೆ ಇದೆ. ಆದರೆ, ಸದ್ಯದ ಅಧಿವೇಶನದಲ್ಲಿ ಮಾತ್ರ ಅಡೆತಡೆ ಎದುರಿಸಲಿದೆ.

ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದೆ, ಆದರೆ ಡಿಸೆಂಬರ್ 24 ರಂದು ಕೊನೆಗೊಳ್ಳುವ ಪ್ರಸ್ತುತ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕರಿಸಲು ಕೇಸರಿ ಪಕ್ಷಕ್ಕೆ ಕಷ್ಟವಾಗಬಹುದು. ಏಕೆಂದರೆ ಮೇಲ್ಮನೆಯಲ್ಲಿ ಇನ್ನೂ ಪೂರ್ಣ ಬಹುಮತ ಹೊಂದಿಲ್ಲ.

ಇತ್ತೀಚಿನ ಕೌನ್ಸಿಲ್ ಚುನಾವಣೆಯ ನಂತರ ಪರಿಷತ್ ನಲ್ಲಿ ಬಿಜೆಪಿಯ ಸಂಖ್ಯೆ 25 ಸ್ಥಾನಗಳಿಗೆ ಏರಿದೆ ಮತ್ತು ಪ್ರಸ್ತುತ ಸದಸ್ಯರ ಅಧಿಕಾರಾವಧಿಯು ಕೊನೆಗೊಳ್ಳುವ ಜನವರಿ 5 ರ ನಂತರ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸುತ್ತಾರೆ. 
ಸದ್ಯದ ಬಲಾಬಲದ ಪ್ರಕಾರ, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ 32 ಸದಸ್ಯರನ್ನು ಹೊಂದಿದ್ದು, ಈ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಬೇಕಾದರೆ ಜೆಡಿಎಸ್ ಬೆಂಬಲದ ಅಗತ್ಯವಿದೆ.

ಆದರೆ, ಜನವರಿ 5 ರ ನಂತರ, ಅದರ ಸಂಖ್ಯೆಯು 37ಕ್ಕೆ ಏರಿಕೆಯಾತ್ತದೆ ಮತ್ತು ಡಿಸೆಂಬರ್ 10 ರ ಚುನಾವಣೆಯಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು ಐದು ಸ್ಥಾನ ಹೆಚ್ಚಿಸಿಕೊಂಡಿರುವುದರಿಂದ ಬಹುಮತಕ್ಕೆ ಕೇವಲ ಒಂದು ಸ್ಥಾನ ಮಾತ್ರ ಕಡಿಮೆಯಾಗುತ್ತದೆ. ಆದಾಗ್ಯೂ, ಮಸೂದೆಯನ್ನು ಪರಿಷತ್ ನಲ್ಲಿ ಅಂಗೀಕರಿಸಲು ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಅವರ ಬೆಂಬಲ ಪಡೆಯುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. 

ಇದೀಗ ಮಂಡನೆಯಾಗಿರುವ ಮತಾಂತರ ನಿಷೇಧ ಮಸೂದೆಯನ್ನು ಈಗ ವಿಧಾನಸಭೆಯಲ್ಲಿ ಅಂಗೀಕರಿಸಲಾಗುವುದು ಮತ್ತು ಮುಂದಿನ ಅಧಿವೇಶನದಲ್ಲಿ ಅದನ್ನು ಪರಿಷತ್ ನಲ್ಲಿ ಅಂಗೀಕರಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

SCROLL FOR NEXT