ರಾಜ್ಯ

ಬೆಳಗಾವಿ: ಮಾಧ್ಯಮದವರಿಗೆ ಸುವರ್ಣ ವಿಧಾನಸೌಧ ಪ್ರವೇಶಕ್ಕೆ ನಿರ್ಭಂಧ, ಪತ್ರಕರ್ತರಿಂದ ಧರಣಿ

Lingaraj Badiger

ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧಲ್ಲಿ ದೃಶ್ಯ ಮಾಧ್ಯಮದ ಪತ್ರಕರ್ತರನ್ನು ಒಳಗಡೆಗೆ ಹೋಗದಂತೆ ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆಯಿತು. ಇದರಿಂದ ಆಕ್ರೋಶಗೊಂಡ ಪತ್ರಕರ್ತರು ಕೆಲಕಾಲ ಧರಣಿ ಸಹ ನಡೆಸಿದರು.

ಎಂದಿನಂತೆ ಇಂದು ಬೆಳಗ್ಗೆ ಟಿವಿ ಮಾಧ್ಯಮದವರು ವಿಧಾನಸೌಧ ಒಳಪ್ರವೇಶಿಸಲು ಹೋದಾಗ ಅವರನ್ನು ಪೊಲೀಸರು ತಡೆದರು. ಇದರಿಂದಾಗಿ ಮಾಧ್ಯಮದವರು ವಿಧಾನಸೌಧದ ಹೊರಗಡೆಯೇ ಉಳಿಯುವಂತಹ ಪರಿಸ್ಥಿತಿ ಎದುರಾಯಿತು.

ಸುವರ್ಣ ಸೌಧದಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ ಎಂದು ಹೇಳಲಾಗಿದೆ. ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ಟಿವಿ ಮಾದ್ಯಮಗಳ ವರದಿಗಾರರು, ಕ್ಯಾಮೆರಾಮೆನ್‌ ಗಳು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. 

ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಟಿವಿ ಮಾಧ್ಯಮದವರಿಗೆ ವಿಧಾನಸೌಧದೊಳಗೆ  ಪ್ರವೇಶ ನೀಡುವಂತೆ ಸೂಚನೆ ನೀಡಿದರು. ನಂತರ ಮಾಧ್ಯಮದವರಿಗೆ ಪ್ರವೇಶ ನೀಡಲಾಯಿತು.

ಸುವರ್ಣ ವಿಧಾನಸೌಧದ ಒಳಗೆ ಮಾದ್ಯಮದವರಿಗೆ ಪ್ರವೇಶ ನಿರ್ಬಂಧದ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ  ಸ್ಪೀಕರ್‌ ಸ್ಥಳಕ್ಕೆ ಭೇಟಿ ನೀಡಿದರು. ಮಾದ್ಯಮಗಳಿಗೆ ಸುವರ್ಣ ವಿಧಾನಸೌಧದ ಪ್ರವೇಶ ನಿರ್ಭಂದಕ್ಕೆ ನಾನು ಯಾವುದೇ ಆದೇಶ ನೀಡಿಲ್ಲ ಎಂದರು.

ಈ ಮದ್ಯೆ ನಿರ್ಬಂಧದ ವಿಚಾರವಾಗಿ ಸಂದೇಶವನ್ನು ಸಭಾದ್ಯಕ್ಷರಿಗೆ ತೋರಿಸುತ್ತಿದ್ದಂತೆ, ಈ ಸಂದೇಶದ ಬಗ್ಗೆ ನಾನು ಪರಿಶೀಲಿಸುತ್ತೇನೆ ಎಂದ ಅವರು, ಮಾದ್ಯಮದವರು ಎಂದಿನಂತೆ ತಮ್ಮ ಚಟುವಟಿಕೆಗಳನ್ನ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.

SCROLL FOR NEXT