ಕರವೇ ಅಧ್ಯಕ್ಷ ನಾರಾಯಣಗೌಡ 
ರಾಜ್ಯ

ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ; ಕಾರ್ಯಕರ್ತರ ಬಂಧನ ವಿರೋಧಿಸಿ ರಾಜಭವನ ಮುತ್ತಿಗೆ: ಕರವೇ ಅಧ್ಯಕ್ಷ ನಾರಾಯಣಗೌಡ

ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ: ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ಕೆಲವು ಕನ್ನಡ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿದ ಅವರು, ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇರುವುದಿಲ್ಲ. ಕರ್ನಾಟಕ ರಕ್ಷಣಾ‌ ವೇದಿಕೆಯ ಕಾರ್ಯಕರ್ತರೂ ಬಂದ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿರುವ ಅವರು,  'ಕರ್ನಾಟಕ ರಕ್ಷಣಾ‌ ವೇದಿಕೆ ಮೊದಲಿನಿಂದಲೂ ಈ ಬಗೆಯ ದಿಢೀರ್ ಬಂದ್ ಕರೆಗಳಿಂದ ದೂರ ಉಳಿಯುತ್ತಾ ಬಂದಿದೆ. ಬಂದ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ, ಅದೊಂದೇ‌ ಚಳವಳಿಯ ಮಾರ್ಗವಲ್ಲ. ಬಂದ್ ಚಳವಳಿಯ ಕೊನೆಯ ಅಸ್ತ್ರವಾಗಬೇಕು ಎಂಬುದು ನಮ್ಮ ನಿಲುವು. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ರಾಜ್ಯದ ಜನರು ನೊಂದು ನಲುಗಿದ್ದಾರೆ. ಸರ್ಕಾರವೇ ನೂರಾರು ದಿನಗಳ ಲಾಕ್ ಡೌನ್ ಹೇರಿದ ಪರಿಣಾಮವಾಗಿ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಎಷ್ಟು ಸರಿ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇಂದು ಕೆಲವು ಸಂಘಟನೆಗಳು ನಡೆಸಿದ ಸಭೆಯಲ್ಲಿ ನಾನು ಪಾಲ್ಗೊಂಡಿರಲಿಲ್ಲ, ನನಗೆ ಆಹ್ವಾನವೂ ಇರಲಿಲ್ಲ. ವಾಟಾಳ್ ನಾಗರಾಜ್ ಅವರು ಹಿರಿಯರು, ಅವರ ಕುರಿತು ನನಗೆ ಅಪಾರವಾದ ಗೌರವವಿದೆ. ಆದರೆ ದಿಢೀರನೆ ಬಂದ್ ಗಳಿಗೆ ಕರೆ ನೀಡಿದರೆ ಅದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಂದ್ ಇಲ್ಲ, ರಾಜಭವನ ಮುತ್ತಿಗೆ
ಅಂತೆಯೇ ಎಂಇಎಸ್ ಮತ್ತು ಶಿವಸೇನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ರಾಜ್ಯದಲ್ಲಿ ಈ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ಡಿಸೆಂಬರ್ 28ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗು ಡಿ. 30 ರಂದು ‘ರಾಜಭವನ ಮುತ್ತಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಈ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡವನ್ನು ಹೇರಲಿದ್ದೇವೆ ಎಂದು ಹೇಳಿದ್ದಾರೆ.

ಕಾರ್ಯಕರ್ತರ ಬಂಧನ ಅತಿರೇಕದ ಕ್ರಮ
ಇದೇ ವೇಳೆ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ ಆರೋಪ ಮೇರೆಗೆ ಬಂಧಿತರಾಗಿರುವ 13 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಸೆಕ್ಷನ್ ಗಳನ್ನು ಹೂಡಲಾಗುತ್ತಿದೆ. ಇದು ಆಘಾತಕಾರಿಯಾಗಿದೆ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಕನ್ನಡಿಗರ ಅಸ್ಮಿತೆಯಾದ ಕನ್ನಡ ಬಾವುಟಗಳನ್ನು ಸುಡಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿಶ್ವಗುರು ಬಸವಣ್ಣನವರ ಪ್ರತಿಮೆ, ಭಾವಚಿತ್ರಗಳನ್ನು ವಿರೂಪಗೊಳಿಸಲಾಯಿತು. ಇದರಿಂದ ಪ್ರಚೋದನೆಗೆ ಒಳಗಾದ ಕೆಲವು ಯುವಕರು ಆವೇಶದಿಂದ ಮಾಡಿದ ಕೃತ್ಯಕ್ಕೆ ರಾಜ್ಯ ಸರ್ಕಾರ ಇಷ್ಟು ಅತಿರೇಕದ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ. ಕನ್ನಡ ಕಾರ್ಯಕರ್ತರು ಮಾಡಿದ್ದು ಸರಿಯಲ್ಲ. ಇದನ್ನು‌ ಕರ್ನಾಟಕ ರಕ್ಷಣಾ ವೇದಿಕೆ ಸಮರ್ಥಿಸುವುದಿಲ್ಲ. ಆದರೆ ಮೂವರು ಮಾಡಿದ ಕೃತ್ಯಕ್ಕೆ ಹದಿಮೂರು ಜನರನ್ನು ಬಂಧಿಸಲಾಗಿದೆ. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ವಿಡಿಯೋ‌ ಶೇರ್ ಮಾಡಿದವರನ್ನು ಬಂಧಿಸಲಾಗಿದೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ನಿನ್ನೆ ನ್ಯಾಯಾಂಗ ಬಂಧನದಲ್ಲಿದ್ದ ಕನ್ನಡ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಇದರ ಉದ್ದೇಶ ಸ್ಪಷ್ಟವಾಗಿದೆ. ಕನ್ನಡ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರ‌ನ್ನು‌ ಬಳಸಿಕೊಳ್ಳಲಾಗುತ್ತಿದೆ. ಇದು ಅತ್ಯಂತ ನಾಚಿಗೆಗೇಡಿನ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು, ಕನ್ನಡಿಗರ‌ ಮೇಲೆ ಹಲ್ಲೆ ನಡೆಸಿ, ಕನ್ನಡಿಗರ ಆಸ್ತಿಪಾಸ್ತಿ ನಷ್ಟಗೊಳಿಸಿದವರ ಮೇಲೆ‌ ಅಲ್ಲಿನ ಶಿವಸೇನೆ ನೇತೃತ್ವದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಅಮಾಯಕ ಕನ್ನಡ ಕಾರ್ಯಕರ್ತರನ್ನು‌ ಹಿಂಸಿಸಲಾಗುತ್ತಿದೆ. ಕನ್ನಡ ಯುವಕರು ಕನ್ನಡ ಚಳವಳಿಯಲ್ಲಿ ತೊಡಗದಂತೆ ಪಟ್ಟಭದ್ರ‌ಹಿತಾಸಕ್ತಿಗಳು ಕುತಂತ್ರ ನಡೆಸುತ್ತಿರುವ ಪರಿಣಾಮವಾಗಿ ಕನ್ನಡ ಕಾರ್ಯಕರ್ತರನ್ನು‌ ಗುರಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ‌ ಕೂಡಲೇ ಬಂಧಿತ‌ ಕನ್ನಡ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು‌ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT