ರಾಜ್ಯ

4,670 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಚರಂಡಿಗಳ ಮರು-ಮಾದರಿ: ಸಿಎಂ ಬೊಮ್ಮಾಯಿ

Srinivasamurthy VN

ಬೆಳಗಾವಿ: 4,670 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಚರಂಡಿಗಳ ಮರು-ಮಾದರಿ ವ್ಯವಸ್ಥೆ ಕಾಮಗಾರಿ ನಡೆಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಪರಿಷತ್‌ನಲ್ಲಿ ಎಂಎಲ್‌ಸಿ ಪಿ ಆರ್ ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, 'ಬೆಂಗಳೂರು ನಗರದ ಪ್ರಾಥಮಿಕ ಮತ್ತು ಪ್ರಧಾನ ಚರಂಡಿಗಳ ಮರು ಮಾದರಿ ಕಾಮಗಾರಿ ನಡೆಯುತ್ತಿದ್ದು, 842 ಕಿ.ಮೀ ಪೈಕಿ 428 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 413 ಕಿ.ಮೀ.ಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿನ ಚರಂಡಿಗಳನ್ನು9 ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಒಟ್ಟು ಉದ್ದ ಸುಮಾರು 842 ಕಿ.ಮೀ. ಇದ್ದು, ಚರಂಡಿಗಳ ಮರು ಮಾದರಿ ಕಾಮಗಾರಿಗೆ 4,670 ಕೋಟಿ ರೂ.ವೆಚ್ಚ ಅಂದಾಜಿಸಿ ಕಾಮಗಾರಿ ಆರಂಭಿಸಲಾಗಿದೆ. ಇಲ್ಲಿನ, ಹಲವು ಚರಂಡಿಗಳನ್ನು ಪರಿಶೀಲಿಸಿ, ಗುಂಡಿಗಳನ್ನು ಗುರುತಿಸಿ ಅಂತಹ ಪ್ರದೇಶಗಳನ್ನು ಮರುರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಮಳೆಗಾಲದ ವೇಳೆಗೆ ಬಹುತೇಕ ಚರಂಡಿ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಚರಂಡಿಗಳು ತುಂಬಿ ಹರಿಯದಂತೆ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅನೇಕರು ಚರಂಡಿಗಳನ್ನು ಅತಿಕ್ರಮಿಸಿ ಮನೆ, ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ತಿಳಿಸಿದರು. 

ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ಇದನ್ನು ಗಮನಿಸಿದ ಬೊಮ್ಮಾಯಿ ಅವರು, ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟು 382 ಎಕರೆ ಚರಂಡಿಯನ್ನು ಒತ್ತುವರಿ ಮಾಡಲಾಗಿದ್ದು, ಅದರ ವಿರುದ್ಧ ಸುಮಾರು 2626 ಪ್ರಕರಣಗಳಿವೆ. ಸುಮಾರು 1900 ಪ್ರಕರಣಗಳು ಇತ್ಯರ್ಥಗೊಂಡಿದ್ದು, 700ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದರು.

ಅತಿಕ್ರಮಣದಾರರ ವಿರುದ್ಧ ಹೋರಾಡಲು ಮತ್ತು ಕಾನೂನು ದಾವೆಗಳಲ್ಲಿ ಜಯಗಳಿಸಲು ಸರ್ಕಾರ ಕಾನೂನು ತಂಡವನ್ನು ನೇಮಿಸಿದೆ. ಒಂದು ವೇಳೆ ಆ ತಂಡ ಗೆಲ್ಲಲು ವಿಫಲವಾದರೆ, ಅದನ್ನು ಬದಲಾಯಿಸಲಾಗುವುದು ಎಂದು ಅವರು ಹೇಳಿದರು. 
 

SCROLL FOR NEXT