ರಾಜ್ಯ

ಶಾಲಾ ಶುಲ್ಕ ಪಾವತಿಸದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷೆ: ಪೋಷಕರ ಆರೋಪ

Nagaraja AB

ಬೆಂಗಳೂರು: ವಿದ್ಯಾರ್ಥಿಗಳು ಶುಲ್ಕ ಪಾವತಿಸದ ಕಾರಣಕ್ಕೆ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿ ಹಲವಾರು ಪೋಷಕರು ಶಾಲಾ ಆಡಳಿತ ಮಂಡಳಿಯೊಂದಿಗೆ ವಾಗ್ವಾದ ನಡೆಸಿದರು. ಆದಾಗ್ಯೂ, ಈ ಆರೋಪಗಳು ಸುಳ್ಳು, ಪೋಷಕರು 2019 ರಿಂದ ಶುಲ್ಕವನ್ನು ಪಾವತಿಸಿಲ್ಲ ಎಂದು ಅಮರವಾಣಿ ಪ್ರೌಢಶಾಲೆಯ ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ಬಸವೇಶ್ವರನಗರದ ಅಮರವಾಣಿ ಪ್ರೌಢಶಾಲೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ ಸುಮಾರು 40 ಪೋಷಕರು, 
ಸೋಮವಾರ ವಿದ್ಯಾರ್ಥಿಗಳನ್ನು ತಮ್ಮ ತರಗತಿಗಳಿಂದ ಹೊರತಂದು ಶಾಲೆಯ ಟೆರೇಸ್‌ನಲ್ಲಿ ಬಿಟ್ಟಿದ್ದಾರೆ, ಬಿಸಿಲಿನಿಂದಾಗಿ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಆರೋಪಿಸಿದರು. ಶಾಲಾ ಶುಲ್ಕ ಪಾವತಿಸದ ಕಾರಣಕ್ಕೆ ಈ ರೀತಿಯ ಶಿಕ್ಷೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಆದಾಗ್ಯೂ, ಈ ಆರೋಪವನ್ನು ತಳ್ಳಿ ಹಾಕಿರುವ ಪ್ರಿನ್ಸಿಪಾಲ್ ವೆಂಕಟೇಶ್ ರೆಡ್ಡಿ, ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಶಿಕ್ಷೆ ನೀಡಿಲ್ಲ ಎಂದರು. 2019ರಿಂದಲೂ ಪೋಷಕರು ಶುಲ್ಕ ಪಾವತಿಸಿಲ್ಲ, ಪದೇ ಪದೇ ಮನವಿ ಮಾಡಿದ್ದರೂ, ಶುಲ್ಕ ಪಾವತಿಸದ ಕಾರಣಕ್ಕೆ ಸೋಮವಾರ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿ, ಶುಲ್ಕ ಪಾವತಿಸಲು ತಮ್ಮ ಪೋಷಕರಿಗೆ ತಿಳಿಸುವಂತೆ ಹೇಳಿದ್ದೇವೆ, ನಮ್ಮ ಶಾಲೆಗೆ ಟೆರೇಸ್ ಇಲ್ಲ,  ಮೆಟ್ಟಿಲುಗಳಿಲ್ಲದ ಕಾರಣ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸಾಧ್ಯವಿಲ್ಲ, ಈ ಆರೋಪಗಳು ಸುಳ್ಳು ಎಂದು ಅವರು ತಿಳಿಸಿದರು. 

ಶುಲ್ಕವನ್ನು ಪಾವತಿಸಲು ಪೋಷಕರಿಗೆ ಹೇಳಿದ್ದೇವೆ, ದೊಡ್ಡ ಮೊತ್ತ ಸಾಧ್ಯವಾಗದಿದ್ದರೆ, ಮಾಸಿಕ ಕಂತುಗಳಲ್ಲಿ ಅವರು ಪಾವತಿಸಬಹುದು, ಆದರೆ ಶುಲ್ಕ ಪಾವತಿಸದಿದ್ದರೆ ಶಾಲೆಯು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನಿಖರವಾಗಿ ಏನು ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ವಿ ರಮೇಶ್ ತಿಳಿಸಿದ್ದಾರೆ.

SCROLL FOR NEXT