ರಾಜ್ಯ

ಹೊಸ ವರ್ಷಾಚರಣೆಗೆ ನಗರದಲ್ಲಿ ಬಿಗಿ ಭದ್ರತೆ: ಎಂಜಿ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲು

Manjula VN

ಬೆಂಗಳೂರು: ಹೊಸ ವರ್ಷಾಚರಣೆ ಬಂದರೆ ಸಾಕು ಎಲ್ಲ ಕಣ್ಣು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳತ್ತ ಇರುತ್ತದೆ. ಏಕೆಂದರೆ ಹೊಸ ವರ್ಷಾಚರಣೆ ವೇಳೆ ಈ ರಸ್ತೆಗಳು ಮದುವಣಗಿತ್ತಿಯ ರೀತಿ ಸಿಂಗಾರಗೊಂಡು, ಜನರನ್ನು ಕೈಬೀಸಿ ಕರೆಯುತ್ತದೆ. ಆದರೆ, ಈ ಬಾರಿಯ ಸಂಭ್ರಮದ ಮೇಲೂ ಕಳೆದ ವರ್ಷದಂತೆಯೇ ಕೊರೋನಾ ಕರಿನೆರಳು ಬಿದ್ದಿದ್ದು, ಈ ಬಾರಿ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳು ಬಣ್ಣ ಬಣ್ಣದ ದೀಪಗಳ ಬದಲಿಗೆ ಸಿಸಿಟಿವಿ, ಬ್ಯಾರಿಕೇಡ್ ಗಳಿಂದ ಕಂಗೊಳಿಸಲಿದೆ.

ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ನಗರದ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ನಗರ ಪೊಲೀಸರು ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಈ ರಸ್ತೆಗಳಲ್ಲಿ ಬಿಗಿ ಭದ್ರತೆಗಳನ್ನು ಕೈಗೊಳ್ಳಲಾಗಿದೆ. ಇದರಂತೆ ರಸ್ತೆಗಳಲ್ಲಿ 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ.

ಜನರು ರಸ್ತೆಗೆ ಬರುವುದನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ನಾವು ಪ್ರಸ್ತುತ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಜನರನ್ನು ತಡೆಯಲು ಚೆಕ್‌ಪೋಸ್ಟ್‌ಗಳು ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ. ಮತ್ತು ಸಮೀಕ್ಷೆಯ ವರದಿ ಬಳಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಆರಂಭಿಸುತ್ತೇವೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ.

ಕಳೆದ ಶನಿವಾರವಷ್ಟೇ ನಗರ ಪೊಲೀಸರ ಹೊಸ ವರ್ಷದ ಸಂದರ್ಭದಲ್ಲಿ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆ ಯಾವುದೇ ರೀತಿಯ ಆಚರಣೆಗಳನ್ನು ಮಾಡುವಂತಿಲ್ಲ ಎಂದು ಘೋಷಣೆ ಮಾಡಿದ್ದರು.

ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ನಡುವಲ್ಲೇ ಬ್ರಿಗೇಡ್ ರಸ್ತೆ ಅಂಗಡಿ ಮತ್ತು ಸಂಸ್ಥೆಗಳ ಸಂಘದ ಸದಸ್ಯರು ಕೂಡ ಹೊಸ ವರ್ಷದ ದಿನ ಹಾಗೂ ಮುನ್ನಾದಿನ ಬ್ರಿಗೇಡ್ ರಸ್ತೆಯಲ್ಲಿ ಈ ವರ್ಷ ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT