ರಾಜ್ಯ

ಬಂದ್'ಗೆ ಬೆಂಬಲ ವ್ಯಕ್ತಪಡಿಸಿ ಕರ್ತವ್ಯಕ್ಕೆ ಗೈರು ಹಾಜರಾಗದಿರಿ: ಸಿಬ್ಬಂದಿಗೆ ಕೆಎಸ್ಆರ್'ಟಿಸಿ ಸೂಚನೆ

Manjula VN

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸುವಂತೆ ಆಗ್ರಹಿಸಿ ಡಿ.31ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಬಂದ್'ಗೆ ಸಾರಿಗೆ ನೌಕರರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಗೈರು ಹಾಜರಾಗದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಬಂದ್'ಗೆ 1.15 ಲಕ್ಷ ಸಾರಿಗೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಈ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಕೆಎಸ್ಆರ್'ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರು ಹೇಳಿದ್ದಾರೆ.

ನಮ್ಮ ಸೇವೆ ಅಗತ್ಯ ಸೇವೆಗಳ ಪಟ್ಟಿಗೆ ಸೇರಲಿದ್ದು, ನಮ್ಮ ನೌಕರರುತಮ್ಮ ಜವಾಬ್ದಾರಿಗಳನ್ನು ತಿಳಿದಿದ್ದಾರೆ. ಬಂದ್‌ಗೆ ಬೆಂಬಲ ನೀಡಿ ಕರ್ತವ್ಯಕ್ಕೆ ಗೈರು ಹಾಜರಾಗುವುದನ್ನು ನಾನು ನಿರೀಕ್ಷಿಸುವುದಿಲ್ಲ. ಡಿಸೆಂಬರ್ 31 ರಂದು ನಾವು ಯಾವುದೇ ಅಡೆತಡೆಗಳಿಲ್ಲದೆ ಸೇವೆಯನ್ನು ನಡೆಸುತ್ತೇವೆ. ನಮ್ಮ ಸಿಬ್ಬಂದಿ ಬಂದ್‌ಗೆ ನೈತಿಕ ಬೆಂಬಲವನ್ನು ಮಾತ್ರ ನೀಡಲಿದ್ದಾರೆಂದು ಶಿವಯೋಗಿ ಅವರು ಹೇಳಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಡಿ.31ರಂದು ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯ ಪ್ರಕಾರ ಸಾರ್ವಜನಿಕರ ಸೇವೆಗಳ ಮೇಲೆ ಪರಿಣಾಮ ಬೀರಬಾರದು. ಒಂದು ವೇಳೆ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದೇ ಆದರೆ, ವೇತನ ಕಡಿತಗೊಳಿಸಲಾಗುವುದು. ಸಾಮಾನ್ಯ ರಜೆ ದೀರ್ಘ ರಜೆ ಪಡೆದವರು ಮಾತ್ರ ವಿನಾಯಿತಿ ಹೊಂದಿರುತ್ತಾರೆ. ಬಂದ್‌ನಲ್ಲಿ ಭಾಗವಹಿಸಲು ಗೈರು ಹಾಜರಾಗುವವರ ವಿರುದ್ಧ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT