ರಾಜ್ಯ

ರಾಜ್ಯದ ವಿವಿ ಘಟಿಕೋತ್ಸವಗಳಲ್ಲಿ ಖಾದಿ ಉಡುಪುಗಳನ್ನು ಬಳಸಲು ರಾಜ್ಯಪಾಲರ ಕರೆ

Nagaraja AB

ಬೆಂಗಳೂರು: ಖಾದಿ ಸಂಸ್ಕೃತಿ ಬಿಂಬಿಸುವುದರ ಜೊತೆಗೆ ನೇಕಾರರು ತಯಾರಿಸುವ ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ  ಖಾದಿ ಧಿರಿಸು ಅಥವಾ ದೇಶಿ ಉಡುಪು ಬಳಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಸಲಹೆ ನೀಡಿದ್ದಾರೆ.

ಸೋಮವಾರ ನಗರದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ -2021 ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾಮಾಜಿಕ ಮೌಲ್ಯಗಳನ್ನು  ಮನದಟ್ಟು ಮಾಡಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿರುತ್ತದೆ. ಎಲ್ಲಾ ವಿಶ್ವವಿದ್ಯಾಲಯಗಳು ಸಾಮಾಜಿಕ ವಿಷಯಗಳನ್ನು ಅಧ್ಯಯನ ಮಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ದೇಶಿ ಉಡುಪು ಬಳಕೆ ಮಾಡುವ ಮೂಲಕ ದೇಶದ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು, ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಒಟ್ಟಾರೇ ವಿವಿಗಳಲ್ಲಿ  ಶಿಕ್ಷಣದ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ಕುಲಪತಿಗಳದಾಗಿರುತ್ತದೆ ಎಂದರು.

ಯುಜಿಸಿಯ ಮಾರ್ಗಸೂಚಿಗಳ ಆಧಾರದ ಮೇಲೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ಜಾರಿಗೊಳಿಸುವಂತೆ ರಾಜ್ಯಪಾಲರು ಸಭೆಗೆ ಸೂಚಿಸಿದರು. ವಿಶ್ವವಿದ್ಯಾಲಯದ ಆಡಳಿತಾತ್ಮಕ ಅನುಭವಗಳೊಂದಿಗೆ ಕುಲಪತಿಗಳು ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಉನ್ನತ ಶಿಕ್ಷಣವನ್ನು ಸಮಾಜಕ್ಕೆ ಸಮಾನವಾಗಿ ದೊರಕಿಸುವ ನಿಟ್ಟಿನಲ್ಲಿ  ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತರಾಗಿರಬೇಕು ಎಂದು ತಿಳಿಸಿದರು.

SCROLL FOR NEXT