ರಾಜ್ಯ

ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳಲ್ಲಿ 358 ನವಜಾತ ಶಿಶುಗಳ ಸಾವು!

Manjula VN

ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ 358 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಈ ಬೆಳವಣಿಗೆಯು ಆತಂಕ ಹೆಚ್ಚಾಗುವಂತೆ ಮಾಡಿದೆ.

ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ವಿಮ್ಸ್) ಒಂದರಲ್ಲಿಯೇ 8 ತಿಂಗಳಿನಲ್ಲಿ 293 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಒಂದೇ ದಿನ 6 ನವಜಾತ ಶಿಶುಗಳು ಸಾವನ್ನಪ್ಪಿರುವುದು ದಾಖಲಾಗಿದೆ. ಏಪ್ರಿಲ್ 2020 ಮತ್ತು ನವೆಂಬರ್ 2021 ರ ನಡುವೆ, ಬಳ್ಳಾರಿ ಜಿಲ್ಲೆಯಲ್ಲಿ 358 ನವಜಾತ ಶಿಶುಗಳ ಸಾವುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಈ ರೀತಿಯ ಶಿಶು ಮರಣ ಪ್ರಮಾಣ ಸಾಮಾನ್ಯ (ಐಎಂಆರ್)ವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

358 ರಲ್ಲಿ, 293 ಸಾವುಗಳು ವಿಮ್ಸ್‌ನಲ್ಲಿಯೇ ಸಂಭವಿಸಿದೆ. ಉಳಿದ 65 ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಕಡಿಮೆ ತೂಕ, ಮಗು ಮತ್ತು ತಾಯಿಯ ಅನಾರೋಗ್ಯ ಸೇರಿದಂತೆ ಹಲವಾರು ಕಾರಣಗಳು ಸಾವಿನ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ವಿಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ 1,000 ಶಿಶುಗಳ ಪೈಕಿ 24 ಶಿಶುಗಳ ಮರಣವಾಗುತ್ತಿದೆ. ಆದರೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಈ ಸಂಖ್ಯೆ 12ರ ಒಳಗಿದೆ, ಅಪೌಷ್ಟಿಕತೆಯೇ ಸಾವಿನ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದ್ದು, ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಚರ್ಚೆ ನಡೆಸುತ್ತಿದೆ. ರಾಯಚೂರು, ಬೀದರ್, ಕಲಬುರಗಿ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ತಾಯಂದಿರು ಮತ್ತು ಶಿಶುಗಳು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದು, ಇದು ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಗರ್ಭಾವಸ್ಥೆಯಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಅವರಿಗೆ ಹೆಚ್ಚಿನ ಕಾಳಜಿ ಅಗತ್ಯವಿದೆ, ಬಳ್ಳಾರಿಯಲ್ಲಿನ ಐಎಂಆರ್ (ಶಿಶು ಮರಣ ಪ್ರಮಾಣ) ಕುರಿತ ವರದಿ ಆಘಾತಕಾರಿಯಾಗಿದೆ. ನಾನು ವೈದ್ಯನಲ್ಲ ಮತ್ತು ಸಾವಿಗೆ ತಾಂತ್ರಿಕ ಕಾರಣಗಳು ನನಗೆ ತಿಳಿದಿಲ್ಲ. ಆದರೆ ಇಡೀ ರಾಜ್ಯಕ್ಕೆ ಒಂದೇ ರೀತಿಯ ಪೌಷ್ಟಿಕಾಂಶ ಕಿಟ್‌ಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಸಭೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

SCROLL FOR NEXT